May 12, 2026
image (66)

ಪಟ್ನಾ: ಬ್ಯಾಂಕ್ ಎಟಿಎಂ ಎಂದರೆ ನೆನಪಾಗುವುದು ಹಣದ ಕಂತೆಗಳು. ಆದರೆ ಬಿಹಾರದ ದಾನಾಪುರದಲ್ಲಿ ಎಟಿಎಂ ಕೇಂದ್ರವೊಂದು ಹಣದ ಬದಲು ಹೊಸ ‘ಹೇರ್ ಸ್ಟೈಲ್’ ನೀಡುವ ಮೂಲಕ ಸುದ್ದಿಯಾಗಿದೆ! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಬೋರ್ಡ್‌ಗಳನ್ನು ತೆರವುಗೊಳಿಸಲು ಮರೆತ ಪರಿಣಾಮ, ಅಲ್ಲಿ ಸಲೂನ್ ಆರಂಭವಾಗಿ ಗ್ರಾಹಕರನ್ನು ಪೇಚಿಗೆ ಸಿಲುಕಿಸಿದ ವಿಚಿತ್ರ ಘಟನೆ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ.

ದಾನಾಪುರದ ರೂಪಸ್‌ಪುರ ವ್ಯಾಪ್ತಿಯ ‘ಉಷಾ ವಿಲ್ಲಾ’ ಎಂಬ ಕಟ್ಟಡದಲ್ಲಿದ್ದ ಎಸ್‌ಬಿಐ ಎಟಿಎಂ ಕೇಂದ್ರವು ಇತ್ತೀಚೆಗೆ ಸ್ಥಳಾಂತರಗೊಂಡಿತ್ತು. ಆದರೆ, ಸ್ಥಳಾಂತರದ ವೇಳೆ ಬ್ಯಾಂಕ್ ಕೇವಲ ಹಣದ ಯಂತ್ರವನ್ನು ಮಾತ್ರ ತೆಗೆದುಕೊಂಡು ಹೋಗಿ, ತನ್ನ ಲೋಗೋ ಮತ್ತು ನಾಮಫಲಕಗಳನ್ನು ಅಲ್ಲೇ ಬಿಟ್ಟಿತ್ತು. ಇದನ್ನು ಸದುಪಯೋಗಪಡಿಸಿಕೊಂಡ ಸ್ಥಳೀಯ ಸಲೂನ್ ಮಾಲೀಕರೊಬ್ಬರು, ಅದೇ ಜಾಗದಲ್ಲಿ ಕ್ಷೌರದಂಗಡಿಯನ್ನು ತೆರೆದಿದ್ದರು.

ಹೊರಗಿನಿಂದ ನೋಡಲು ಇದು ಅಪ್ಪಟ ಎಸ್‌ಬಿಐ ಎಟಿಎಂನಂತೆಯೇ ಕಾಣುತ್ತಿತ್ತು. ಹಣ ಡ್ರಾ ಮಾಡುವ ಅವಸರದಲ್ಲಿ ಕಾರ್ಡ್ ಹಿಡಿದು ಒಳಬರುತ್ತಿದ್ದ ಗ್ರಾಹಕರಿಗೆ ಅಲ್ಲಿ ನೋಟುಗಳ ಬದಲು ಕನ್ನಡಿ, ಕತ್ತರಿ ಮತ್ತು ಸಲೂನ್ ಕುರ್ಚಿಗಳು ಸ್ವಾಗತ ನೀಡುತ್ತಿದ್ದವು. ಈ ದೃಶ್ಯಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು “ಕ್ಯಾಶ್ ವಿತ್‌ಡ್ರಾ ಮಾಡಲು ಹೋದವರು ಈಗ ಕೇಶ್ (ಕೂದಲು) ವಿತ್‌ಡ್ರಾ ಮಾಡುತ್ತಿದ್ದಾರೆ” ಎಂದು ತಮಾಷೆ ಮಾಡುತ್ತಿದ್ದಾರೆ.

ಬ್ಯಾಂಕ್ ಹೆಸರಿನಲ್ಲೇ ಸಲೂನ್ ನಡೆಯುತ್ತಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಂಕಿನ ಘನತೆಗೆ ಧಕ್ಕೆ ತರುತ್ತಿರುವುದನ್ನು ಗಮನಿಸಿದ ಎಸ್‌ಬಿಐ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಕಟ್ಟಡದ ಮೇಲಿದ್ದ ಎಸ್‌ಬಿಐ ಬೋರ್ಡ್, ಲೋಗೋ ಹಾಗೂ ಎಟಿಎಂ ಕೇಂದ್ರದ ಅಧಿಕೃತ ಗುರುತುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.