
ಕಾರವಾರ: ಅರಬ್ಬಿ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಕಾರವಾರದ ಪರ್ಷಿಯನ್ ಮಾದರಿಯ ಬೋಟ್ ಒಂದು ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆಯಾಗಿದೆ. ಬೋಟ್ನಲ್ಲಿದ್ದ ಎಲ್ಲಾ 22 ಮೀನುಗಾರರನ್ನು ಇತರ ಮೀನುಗಾರಿಕಾ ಬೋಟ್ ನವರು ರಕ್ಷಿಸುವ ಮೂಲಕ ಸಂಭವನೀಯ ಭೀಕರ ದುರಂತವೊಂದು ತಪ್ಪಿದಂತಾಗಿದೆ.
ಕಾರವಾರ ತಾಲೂಕಿನ ಮುದಗಾ ಬಂದರಿನಿಂದ ಸುಮಾರು ಒಂದು ವಾರದ ಹಿಂದೆ ದಿನೇಶ್ ಕಾಂಚನ್ ಎಂಬುವವರಿಗೆ ಸೇರಿದ ‘ಶ್ರೀ ಅಮ್ಮ’ ಹೆಸರಿನ ಪರ್ಷಿಯನ್ ಬೋಟ್ ಮೀನುಗಾರಿಕೆಗಾಗಿ ತೆರಳಿತ್ತು. ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಬೋಟ್ಗೆ ನೀರು ನುಗ್ಗಿದೆ ಎನ್ನಲಾಗಿದೆ. ಪರಿಣಾಮವಾಗಿ ಬೋಟ್ ಕ್ಷಣಾರ್ಧದಲ್ಲಿ ಸಮುದ್ರದ ಪಾಲಾಗಿದೆ.
ಬೋಟ್ ಮುಳುಗುತ್ತಿರುವುದನ್ನು ಕಂಡು ತಕ್ಷಣವೇ ಕಾರ್ಯಪ್ರವೃತ್ತರಾದ ಸಮೀಪದ ಇತರ ಬೋಟ್ಗಳ ಮೀನುಗಾರರು, ಮುಳುಗುತ್ತಿದ್ದ ಬೋಟ್ನಲ್ಲಿದ್ದ 22 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಎಲ್ಲರೂ ಕಾರವಾರ ಹಾಗೂ ಉತ್ತರ ಕನ್ನಡ ಮೂಲದವರಾಗಿದ್ದು, ಸದ್ಯ ಸುರಕ್ಷಿತವಾಗಿ ದಡ ಸೇರಿದ್ದಾರೆ.
ಬೋಟ್ ಮುಳುಗಡೆಯಾದ ರಭಸಕ್ಕೆ ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಾರಿಕಾ ಬಲೆಗಳು, ಇಂಧನ ಮತ್ತು ಸಂಗ್ರಹವಾಗಿದ್ದ ಮೀನು ಸೇರಿ ಸುಮಾರು 1.5 ರಿಂದ 2 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
