ಬಂಟ್ವಾಳ: ಅಯ್ಯಪ್ಪ ವೃತಧಾರಿಯಾಗಿ ಶಬರಿಮಲೆ ಯಾತ್ರೆಗೆಂದು ತನ್ನ ಸ್ನೇಹಿತರ ಜತೆ ತೆರಳಿದ್ದ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಪಂಬ ಸನ್ನಿಧಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಬಂಟ್ವಾಳ ತಾಲೂಕಿನ ಕೆದಿಲ ಪಾಟ್ರಕೋಡಿ ಸರಕಾರಿ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಉಮರಗಿ ಶರಣಪ್ಪ(57) ಮೃತಪಟ್ಟವರಾಗಿದ್ದಾರೆ. ಬಂಟ್ವಾಳ ತಾಲೂಕಿನ ವಿವಿಧೆಡೆಯ ಸುಮಾರು 24 ಜನ ಮಂಗಳವಾರ ಮಧ್ಯಾಹ್ನದ ರೈಲಿನಲ್ಲಿ ಶಬರಿಮಲೆ ಯಾತ್ರೆಗೆ ತೆರಳಿದ್ದು, ಬುಧವಾರ ಮುಂಜಾನೆ ದೇವರ ದರ್ಶನಕ್ಕೆ ತೆರಳಲು ಹೋಗುತ್ತಿದ್ದಾಗ ಪಂಬ ಸನ್ನಿಧಿಯಲ್ಲಿ ಅವರು ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರ ಜೊತೆಗಿದ್ದವರು ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಯೊಂದಕ್ಕೆ ಅಂಬ್ಯುಲೆನ್ಸ್ ಮೂಲಕ ಸಾಗಿಸಿ ದಾಖಲಿಸಿದರಾದರೂ ಹೃದಯಸ್ತಂಭನಕ್ಕೊಳಗಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.