ಅಂಗನವಾಡಿ ಪುಟಾಣಿಯೊಬ್ಬಳು ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಔರಾದ ಪಟ್ಟಣದ ಟೀಚರ್ ಕಾಲೋನಿಯಲ್ಲಿರುವ ಅಂಗನವಾಡಿಯಲ್ಲಿ ದುರಂತ ನಡೆದಿದ್ದು, ಸ್ಫೂರ್ತಿ ಎಂಬ ಬಾಲಕಿ ಮೃತಪಟ್ಟಿದ್ದಾಳೆ.
ಅಂಗನವಾಡಿಯ ಪಕ್ಕದಲ್ಲೇ ಕೊಳಚೆ ನೀರಿನ ಸಂಗ್ರಹ ಮತ್ತು ವಿಲೇವಾರಿಗಾಗಿ ಈ ಸೆಪ್ಟಿಕ್ ಟ್ಯಾಂಕನ್ನು ನಿರ್ಮಿಸಲಾಗಿದೆ. ಬಾಲಕಿ ಅಂಗನವಾಡಿಯ ತರಗತಿಯಿಂದ ಹೊರಗೆ ಬಂದು ಆಟವಾಡುತ್ತಿದ್ದ ವೇಳೆ ಆಯತಪ್ಪಿ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದಿದ್ದಾಳೆ ಎನ್ನಲಾಗಿದೆ.
ಮಗು ಟ್ಯಾಂಕ್‌ಗೆ ಬಿದ್ದಿದ್ದನ್ನು ತಿಳಿದ ಊರಿನವರು ದೌಡಾಯಿಸಿ ಬಂದಿದ್ದು ಎಲ್ಲರೂ ಸೇರಿ ಮೇಲೆತ್ತಿದರು. ಆದರೆ, ಅಷ್ಟು ಹೊತ್ತಿಗೆ ಮಗು ಸಾವನ್ನಪ್ಪಿತ್ತು. ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಊರಿನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಔರಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.