ಕಾರ್ಕಳ: ಚೆಕ್ ಬೌನ್ಸ್ ಕ್ರಿಮಿನಲ್ ಪ್ರಕರಣವನ್ನು ವಿಚಾರಣೆ ನಡೆಸಿರುವ ಬೆಳ್ತಂಗಡಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶ ಮನು ಬಿ.ಕೆ. ಅವರು ಆರೋಪಿ ಶ್ರೀನಿವಾಸ ನಿರಪರಾಧಿ ಎಂಬುದಾಗಿ ತೀರ್ಪು ನೀಡಿರುತ್ತಾರೆ.
ಕೈ ಸಾಲ ಮರು ಪಾವತಿ ಬಗ್ಗೆ ಆರೋಪಿಯು ತನಗೆ ನೀಡಿದ ರೂಪಾಯಿ ಹತ್ತು ಲಕ್ಷ ಮೊತ್ತದ ಚೆಕ್ಕನ್ನು ತಾನು ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರುಪಡಿಸಿದಾಗ ಸದರಿ ಚೆಕ್ ಅಮಾನ್ಯಗೊಂಡಿರುವುದಾಗಿ ಆರೋಪಿಸಿ ಬೆಳ್ತಂಗಡಿಯ ಗುರುವಾಯನಕೆರೆಯ ಶಿವಾಜಿ ನಗರದ ವಡಿವೇಲು ಎಂಬ ವ್ಯಕ್ತಿ ಬೆಳ್ತಂಗಡಿ ಹಿರಿಯ ಸಿವಿಲ್ ಜಡ್ಜ್ ನಲ್ಲಿ ದಾವೆ ಹೂಡಿದ್ದರು.
ಕಾರ್ಕಳದ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ಶ್ರೀನಿವಾಸ ಎಂಬವರು ಪ್ರಕರಣದಲ್ಲಿ ಆರೋಪಿಯಾಗಿದ್ದರು.
ಚೆಕ್ ಬೌನ್ಸ್ ಕ್ರಿಮಿನಲ್ ಪ್ರಕರಣವನ್ನು ವಿಚಾರಣೆ ನಡೆಸಿರುವ ನ್ಯಾಯಾಧೀಶರಾದ ಮನು ಬಿ.ಕೆ. ಇವರು ವಜಾ ಗೊಳಿಸಿ ಆರೋಪಿ ಶ್ರೀನಿವಾಸ ನಿರಪರಾಧಿ ಎಂಬುದಾಗಿ ತೀರ್ಪು ನೀಡಿರುತ್ತಾರೆ.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಆರೋಪಿ ಶ್ರೀನಿವಾಸ ತಾನು ಫಿರ್ಯಾದಿದಾರನೊಂದಿಗೆ ಯಾವುದೇ ಹಣ ಕಾಸು ವ್ಯವಹಾರ ನಡೆಸಿರುವುದಿಲ್ಲ. ಆತನಿಂದ ಯಾವುದೇ ಸಾಲವನ್ನು ಪಡೆದಿಲ್ಲ. ಸಾಲ ಮರು ಪಾವತಿಯ ಬಗ್ಗೆ ಯಾವುದೇ ಚೆಕ್ಕನ್ನು ನೀಡಿರುವುದಿಲ್ಲವಾಗಿಯೂ ಮತ್ತು ಫಿರ್ಯಾದಿದಾರ ಮೋಸದಿಂದ ಹೊಂದಿರುವ ತನ್ನ ಸಹಿ ಇರುವ ಖಾಲಿ ಚೆಕ್ಕನ್ನು ದುರ್ಬಳಕೆ ಮಾಡಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದುಗಾಗಿ ತಿಳಿಸಿದ್ದಾರೆ.
ಮಾತ್ರವಲ್ಲದೆ ಫಿರ್ಯಾದಿದಾರನು ತನಗೆ 10 ಲಕ್ಷ ರೂಪಾಯಿ ಸಾಲ ನೀಡುವಷ್ಟರ ಮಟ್ಟಿಗಿನ ಆರ್ಥಿಕ ಸ್ಥಿತಿಯನ್ನು ಹೊಂದಿರುವುದಿಲ್ಲ ಎಂಬಿತ್ಯಾದಿ ಆರೋಪಿ ಪರ ಕಾರ್ಕಳದ ಹಿರಿಯ ನ್ಯಾಯವಾದಿ ಕೆ. ವಿಜೇಂದ್ರ ಕುಮಾರ್ ಇವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಲಾಗಿದೆ.