ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟದ ಸಚಿವರಾದ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ ಹಾಗೂ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಕರ್ನಾಟಕ ಹೈಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿದ್ದು, ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ, ಮಾರ್ಚ್ 7 ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, 11 ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆರ್ ಎಸ್ ಸುರ್ಜೇವಾಲಾ ಮತ್ತು ಮಾರ್ಚ್ 15 ರಂದು ಭಾರೀ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಜರಾಗುವಂತೆ ಸೂಚಿಸಲಾಗಿದೆ. 2022 ರಲ್ಲಿ ಅಂದಿನ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ನಿವಾಸಕ್ಕೆ ಕಾನೂನು ಬಾಹಿರವಾಗಿ ಪಾದಯಾತ್ರೆ ನಡೆಸಿದ ಆರೋಪದ ಮೇಲೆ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ. ನಗರ ಜೀವನ ಈಗಾಗಲೇ ಚಿತ್ರಹಿಂಸೆ ಆಗಿದ್ದು, ಜನ ಪ್ರತಿನಿಧಿಗಳೇ ನಿಯಮವನ್ನು ಅನುಸರಿಸದಿದ್ದರೆ ಮತ್ತು ರಸ್ತೆಗಳನ್ನು ನಿರ್ಬಂಧಿಸಿದರೆ ಏನಾಗುತ್ತದೆ? ಪ್ರತಿನಿಧಿಗಳು ಮೊದಲು ನಿಯಮವನ್ನು ಅನುಸರಿಸ ಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಪ್ರಕರಣ ಕುರಿತಂತೆ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸ ಬೇಕೆಂದು ಒತ್ತಾಯಿಸಿ 2022 ರ ಏಪ್ರಿಲ್‌ನಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.