ಬೆಂಗಳೂರು: ಖೋಟಾನೋಟುಗಳನ್ನು ಮುದ್ರಿಸಿ ನಗರದ ವಿವಿಧೆಡೆ ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಸಿಸಿಬಿ ಪೊಲೀಸರು, 1 ಕೋಟಿ 28 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಈ ಎಲ್ಲ ಖೋಟಾನೋಟುಗಳು 2 ಸಾವಿರ ರೂಪಾಯಿ ಹಾಗೂ 500 ರೂಪಾಯಿ ಮುಖಬೆಲೆವುಳ್ಳವಾಗಿವೆ. ಬಂಧಿತರನ್ನು ತಮಿಳುನಾಡಿನ ತುತುಕುಡಿಯ ಪಿಚ್ಚುಮುತ್ತ್ತು(48), ನಲ್ಲಕಣಿ(53) ಹಾಗೂ ಮಣಿಯನ್(60) ಎಂದು ಗುರುತಿಸಲಾಗಿದೆ. 2 ಸಾವಿರ ರೂಪಾಯಿ ಮುಖಬೆಲೆಯ 2300 ನಕಲಿ ನೋಟು, 500 ಮುಖಬೆಲೆಯ 174 ನಕಲಿ ನೋಟುಗಳು, ಪ್ರಿಂಟರ್ ಹಾರ್ಡ್ ಡಿಸ್ಕ್, ಮೊಬೈಲ್‍ಗಳನ್ನು ವಶಕ್ಕೆ ಪಡೆದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ. ನಕಲಿ ನೋಟುಗಳನ್ನು ಕೊಟ್ಟು ಅಸಲಿ ನೋಟುಗಳನ್ನು ಪಡೆಯಲು ಆರೋಪಿಗಳು ಬೆಂಗಳೂರಿಗೆ ಬಂದಿದ್ದರು. ತಿರುನಲ್‍ವೇಲಿಯ ಪ್ರಮುಖ ಆರೋಪಿ ಕಣ್ಣಿ ಎಂಬಾತನ ಸೂಚನೆ ಮೇರೆಗೆ ಪಿಚ್ಚುಮುತ್ತು ಮತ್ತು ತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.