ಕುಂದಾಪುರ: ಕಳೆದ ಮೂರು ತಿಂಗಳ ಹಿಂದೆ ಕೋಟೇಶ್ವರದ ಮನೆಯೊಂದರಲ್ಲಿ ಬಾಗಿಲು ಮುರಿದು ಚಿನ್ನಾಭರಣ ದೋಚಿದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಕುಂದಾಪುರ ವೃತ್ತನಿರೀಕ್ಷಕರು, ಉಪನಿರೀಕ್ಷಕರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ ಎನ್ನಲಾಗಿದೆ.
ಕಾಸರಗೋಡಿನ ಹೊಸದುರ್ಗ ಪೆರಿಯಾಟಡುಕಂ ನಿವಾಸಿ ಹಾಶಿಮ್ ಎ.ಎಚ್ (42) ಎಂಬಾತನನ್ನು ಕೇರಳದ ಕಾಸರಗೋಡಿನಲ್ಲಿ ಹಾಗೂ ಇನ್ನೋರ್ವ ಆರೋಪಿ ಕುಂಬಳೆ ಮಂಜೇಶ್ವರದ ಅಬೂಬಕ್ಕರ್ ಸಿದ್ದಿಕ್ (48) ಎಂಬಾತನನ್ನು ಮಡಿಕೇರಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡ ತನಿಖಾಧಿಕಾರಿ ವೃತ್ತನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಹೆಚ್ಚಿನ ತನಿಖೆ ನಡೆಸಿದ್ದು, ಆರೋಪಿಗಳು ಜಿಲ್ಲೆಯ ಉಡುಪಿ ನಗರ ಪೊಲೀಸ್ ಠಾಣೆ, ಮಲ್ಪೆ, ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ನಡೆಸಿ, ಕಳವು ಮಾಡಿದ ಚಿನ್ನಾಭರಣಗಳನ್ನು ಕೇರಳ ಮಂಜೇಶ್ವರ ತಾಲೂಕಿನ ಜುವೆಲ್ಸರ್ಸ್ ಒಂದರಲ್ಲಿ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಜುವೆಲ್ಲರಿಯಿಂದ 15 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ, 1 ಲಕ್ಷ ಮೌಲ್ಯದ 1481 ಗ್ರಾಂ ಬೆಳ್ಳಿ ಸಹಿತ ಒಟ್ಟು 16 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.