ನವದೆಹಲಿ: ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದು, ಸೇನಾಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ಆನ್‌ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ(CEE) ಹಾಜರಾಗಬೇಕು. ನಂತರ ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ.
ಪ್ರಕ್ರಿಯೆಯಲ್ಲಿನ ಬದಲಾವಣೆಯ ಕುರಿತು ವಿವಿಧ ಪತ್ರಿಕೆಗಳಲ್ಲಿ ಸೇನೆಯು ಜಾಹೀರಾತುಗಳನ್ನು ನೀಡಿದೆ. ಈ ಸಂಬಂಧ ಫೆಬ್ರವರಿ ಮಧ್ಯದಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎಂದು ಶನಿವಾರ ಮೂಲಗಳು ತಿಳಿಸಿವೆ.
ಮೊದಲ ಆನ್‌ಲೈನ್ ಸಿಇಇ ಏಪ್ರಿಲ್‌ನಲ್ಲಿ ದೇಶದಾದ್ಯಂತ ಸುಮಾರು 200 ಸ್ಥಳಗಳಲ್ಲಿ ನಡೆಯಲಿದೆ ಮತ್ತು ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾಗುವ ಖರ್ಚು ವೆಚ್ಚಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಮಾರ್ಪಾಡುಗಳನ್ನು ಮಾಡಲಾಗಿದೆ. ಇದು ಜನಸಂದಣಿಯನ್ನು ಕಡಿಮೆ ಮಾಡುತ್ತದೆ ಮತ್ತು ಸುಲಭವಾಗಿ ನಿರ್ವಹಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ, ಅಗ್ನಿವೀರ್‌ಗಳ ನೇಮಕಾತಿ ಪ್ರಕ್ರಿಯೆಯು ವಿಭಿನ್ನ ಆದೇಶವನ್ನು ಅನುಸರಿಸಿದ್ದು, ಅಭ್ಯರ್ಥಿಗಳು ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು, ನಂತರ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು ಹಾಗೂ ಕೊನೆಯ ಹಂತವಾಗಿ ಸಿಇಇಗೆ ಅರ್ಹತೆ ಪಡೆಯಬೇಕಾಗಿತ್ತು.