May 30, 2026
Road-accident

ಕುಂದಾಪುರ: ಕುಂದಾಪುರ-ಅಂಪಾರು ರಸ್ತೆಯ ಶಾನ್ಕಟ್ಟು ಬಳಿ ಇಂದು ಬೆಳಿಗ್ಗೆ ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ವೃದ್ಧ ಸವಾರರೊಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಮೂಡುಬಗೆಯ ಬಾಳ್ಕಟ್ಟು ನಿವಾಸಿ ಬಸವ ನಾಯ್ಕ (80) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ದಿನಾಂಕ 29/05/2026 ರಂದು ಬೆಳಿಗ್ಗೆ ಸುಮಾರು 11:45 ಗಂಟೆಗೆ ಬಸವ ನಾಯ್ಕ ರವರು ತಮ್ಮ TVS XL ಮೋಟಾರು ಸೈಕಲ್‌ನಲ್ಲಿ ಕುಂದಾಪುರ-ಅಂಪಾರು ರಸ್ತೆಯ ಮೂಡುಬಗೆಯ ಬಾಳ್ಕಟ್ಟು ಸೇತುವೆ ಕಡೆಯಿಂದ ಬರುತ್ತಿದ್ದರು. ಶಾನ್ಕಟ್ಟು ರಸ್ತೆಗೆ ತಿರುಗಲು ಅವರು ಬಲಬದಿಯ ಇಂಡಿಕೇಟರ್ ಹಾಕಿ ರಸ್ತೆಯನ್ನು ಕ್ರಾಸ್ ಮಾಡಿ ಶಾನ್ಕಟ್ಟು ರಸ್ತೆಯನ್ನು ತಲುಪಿದ್ದರು.

ಇದೇ ವೇಳೆ ಸಿದ್ದಾಪುರ ಕಡೆಯಿಂದ ಬಂದ ಖಾಸಗಿ ಬಸ್‌ನ ಚಾಲಕ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಶಾನ್ಕಟ್ಟು ರಸ್ತೆಯನ್ನು ತಲುಪಿದ್ದ ಬಸವ ನಾಯ್ಕ ರವರ ಮೋಟಾರು ಸೈಕಲ್‌ಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮೋಟಾರು ಸೈಕಲ್ ಮತ್ತು ಸವಾರನನ್ನು ಬಸ್ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ನಿಂತಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಧಾವಿಸಿ ಬಸವ ನಾಯ್ಕ ಅವರನ್ನು ಎತ್ತಿ ಉಪಚರಿಸಿದ್ದಾರೆ. ಅಪಘಾತದ ತೀವ್ರತೆಗೆ ಬಸವ ನಾಯ್ಕ ಅವರ ಬಲಗಾಲು, ಎರಡು ಕೈಗಳು ಸಂಪೂರ್ಣ ಜಖಂಗೊಂಡಿದ್ದು, ಎದೆಗೆ ಬಲವಾದ ಗಾಯಗಳಾಗಿದ್ದವು. ಕೂಡಲೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿನ ವೈದ್ಯಾಧಿಕಾರಿಗಳು ಬಸವ ನಾಯ್ಕ ರವರನ್ನು ಪರೀಕ್ಷಿಸಿ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ಪ್ರಕಟಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಅಪರಾಧ ಕ್ರಮಾಂಕ 37/2026, ಕಲಂ: 281, 106 BNS ನಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.