ಮಂಗಳೂರು ಹೊರವಲಯದ ಉಳ್ಳಾಲದ ರಾ.ಹೆ. 66 ರಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಇಬ್ಬರು ಯುವತಿಯರು ಸಣ್ಣ ಗಾಯಗಳೊಂದಿಗೆ ಪಾರಾಗಿರುವ ಘಟನೆ ಕೊಲ್ಯ- ಅಡ್ಕ ಬಳಿ ಸಂಭವಿಸಿದೆ.
ಉಪ್ಪಳ ಹಿದಾಯತ್ ನಗರ ನಿವಾಸಿ ಬಷಾರ ಅಹಮ್ಮದ್ (22) ಮೃತರಾಗಿದ್ದಾರೆ. ಇನ್ನೋರ್ವ ಗಾಯಾಳು ಗುರುತು ಪತ್ತೆಯಾಗಿಲ್ಲ. ಕೇರಳ ಕಣ್ಣೂರು ನಿವಾಸಿ ಫಾತಿಮ ಹಾಗೂ ರೇವತಿ ಎಂಬವರಿಗೆ ಗಾಯಗಳಾಗಿವೆ. ನಾಲ್ವರಿದ್ದ ಕಾರು ಕೊಲ್ಯ- ಅಡ್ಕ ಬಳಿ ರಸ್ತೆ ವಿಭಜಕವನ್ನು ಏರಿ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಗಂಭೀರ ಗಾಯಾಳುವನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗಾಯಾಳು ಪೈಕಿ ಫಾತಿಮ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿ ನಿಯಾಗಿದ್ದಾರೆ. ನಾಲ್ವರು ಗೆಳೆಯರಾಗಿದ್ದರೆಂದು ತಿಳಿದುಬಂದಿದೆ. ಅಪಘಾತ ನಡೆದ ಸ್ಥಳಕ್ಕೆ ಸಂಚಾರಿ ಹಾಗೂ ಉಳ್ಳಾಲ ಠಾಣಾ ಪೊಲೀಸರು ತಡವಾಗಿ ಆಗಮಿಸಿದ್ದರು ಎಂದು ಆರೋಪಿಸಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ