ಮಂಗಳೂರು: ನಗರದ ಉಳ್ಳಾಲದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಜಂಟಿಯಾಗಿ ಶೌರ್ಯ ಯಾತ್ರೆಯನ್ನು ನಡೆಸಿದ್ದು, ಸಾವಿರಕ್ಕೂ ಅಧಿಕ ಹಿಂದೂ ಪರ ಕಾರ್ಯಕರ್ತರು ಈ ಶೌರ್ಯ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಮಂಗಳೂರು ಹೊರ ವಲಯದ ಉಳ್ಳಾಲ್ ಬೈಲ್ನಲ್ಲಿ ನಡೆಯುತ್ತಿರುವ ಶೌರ್ಯ ಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಬಹಿರಂಗವಾಗಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಪಿಎಫ್ಐ ಕೇವಲ ಪ್ರವೀಣ್ ನೆಟ್ಟಾರುನನ್ನು ಮಾತ್ರವಲ್ಲ ಇನ್ನೂ ಅನೇಕ ಹಿಂದೂಗಳ ಕೊಲೆಗೆ ಸ್ಕೆಚ್ ಹಾಕಿದ್ದರು ಎಂಬ ಮಾಹಿತಿಯನ್ನು ಎನ್ಐಎ ಬಿಡುಗಡೆ ಮಾಡಿದೆ. ಪಿಎಫ್ಐ ಬ್ಯಾನ್ ಆಗಿದ್ದರೂ ಸಹ ಅದರ ಕಾರ್ಯಕರ್ತರು ಇನ್ನೂ ಜೀವಂತವಾಗಿದ್ದಾರೆ. ಇವೆಲ್ಲರೂ ಹಿಂದೂಗಳ ಹತ್ಯೆಗೆ ಪ್ಲಾನ್ ಮಾಡ್ತಿದ್ದಾರೆ. ಆದರೆ ಪಿಎಫ್ಐ ನಾಯಿಗಳಿಗೆ ನಾನು ಎಚ್ಚರಿಕೆ ನೀಡುತ್ತೇನೆ. ನಮ್ಮ ಒಬ್ಬ ಹಿಂದೂ ಕಾರ್ಯಕರ್ತರ ಕೊಲೆ ಮಾಡಿದರೆ ಒಂದಕ್ಕೆ ಎರಡು, ಎರಡಕ್ಕೆ ನಾಲ್ಕು, ನಾಲ್ಕಕ್ಕೆ ಎಂಟರ ಲೆಕ್ಕದಲ್ಲಿ ನಿಮ್ಮ ಕಾರ್ಯಕರ್ತರ ಬಲಿ ತೆಗೆಯುತ್ತೇವೆ ಎಂದು ಬಹಿರಂಗ ವೇದಿಕೆಯಲ್ಲಿ ವಾರ್ನಿಂಗ್ ನೀಡಿದ್ದಾರೆ.
ನಮಗೆ ಬಿಜೆಪಿಯಿಂದಲೇ ಶಾಸಕ ಬೇಕು ಎಂದೇನಿಲ್ಲ. ಹಿಂದೂವನ್ನು ಬೆಂಬಲಿಸುವ ಕಾಂಗ್ರೆಸ್ಸಿಗನಾದರೂ ಅವರಿಗೆ ಉಳ್ಳಾಲದಲ್ಲಿ ಬೆಂಬಲವಿದೆ. ಸಿದ್ದರಾಮಯ್ಯ ಹೇಳಿದಂತೆ ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ. ನಮ್ಮ ಮಣ್ಣಲ್ಲಿ ಹಿಂದುತ್ವವಿದೆ . ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಹಿಂದುತ್ವದ ಫ್ಯಾಕ್ಟರಿ ಮಾಡ್ತೇವೆ ಎಂದು ಸಿದ್ದರಾಮಯ್ಯಗೆ ಶರಣ್ ಪಂಪ್ವೆಲ್ ಬಹಿರಂಗ ಸವಾಲ್ ಹಾಕಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಶರಣ್ ಪಂಪ್ವೆಲ್, ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಆದರೆ ನಾವು ಹಿಂದೂ ಬಲಿದಾನ ನೋಡಿ ಸುಮ್ಮನೇ ಕೂರಲಿಲ್ಲ. ಸುರತ್ಕಲ್ಗೆ ಹೋಗಿ ನುಗ್ಗಿ ಮುಸ್ಲಿಂ ಯುವಕನ ಕೊಲೆ ಮಾಡಿದ್ದೇವೆ. ಇದರ ವಿಡಿಯೋವನ್ನು ನೀವೆಲ್ಲ ನೋಡಿದ್ದೀರಾ..? ಎಂದು ಹೇಳುವ ಮೂಲಕ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಫಾಜಿಲ್ ಹತ್ಯೆ ನಡೆದಿದೆ ಎಂಬ ವಿಚಾರವನ್ನು ಶರಣ್ ಪಂಪ್ವೆಲ್ ಸಮರ್ಥಿಸಿಕೊಂಡಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ನಾಯಕ ಶರಣ್ ಪಂಪ್ವೆಲ್ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಹೇಮನಾಥ್ ಶೆಟ್ಟಿ ಕಾವು “ಫಾಝಿಲ್ ಕೊಲೆ ಪ್ರತಿಕಾರ ಎಂದು ಹೇಳಿರುವುದರಿಂದ ಜಿಲ್ಲೆಯ ಜನರ ಮನಸ್ಸಿನಲ್ಲಿ ಆತಂಕ ಮನೆ ಮಾಡಿದೆ”.
ಹೇಮನಾಥ್ ಶೆಟ್ಟಿ ಕಾವು
ಹಿಂದೂ ಸಂಘಟನೆ ಎನ್ನುವುದು ಕಾನೂನು ಕೈಗೆತ್ತಿಕೊಂಡು ಅನ್ಯಧರ್ಮೀಯರನ್ನು ಕೊಲೆಗೈದು ಪ್ರತೀಕಾರ ತೀರಿಸಿಕೊಳ್ಳಲು ಇರುವಂತೆ ಸರಕಾರ ನಿರ್ದೇಶಿಸಿದೆಯೇ…? ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಇರುವ ದಿನವೇ ಈ ದುರ್ಘಟನೆ ಸಂಭವಿಸಿರುವುದು ಇವರ ಹೇಳಿಕೆಗೆ ಪುಷ್ಟಿ ನೀಡಿದೆ. ಪೂರ್ಣ ಸತ್ಯಾಸತ್ಯತೆ ಹೊರಬರಲು ತನಿಖೆ ಆಗಬೇಕಿದೆ.
ದ.ಕ ಜಿಲ್ಲೆಯ ಜನರು ಶಾಂತಿ ಸೌಹಾರ್ದತೆಯನ್ನು ಬಯಸುತ್ತಿದ್ದಾರೆ. ಸರಕಾರ ಉತ್ತರಿಸಬೇಕು. ದೇಶದ ಕಾನೂನನ್ನು ಗೌರವಿಸುವ ಮಹತ್ತರದ ಜವಾಬ್ದಾರಿ ಮುಖ್ಯಮಂತ್ರಿ ಮತ್ತು ಅವರ ಸಂಪುಟದ್ದು ಎಂದು ಹೇಮನಾಥ್ ಶೆಟ್ಟಿ ಕಿಡಿಕಾರಿದ್ದಾರೆ.