
ಕುಂದಾಪುರ: ಶಂಕರನಾರಾಯಣ ಅರಣ್ಯ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ದೊಟ್ಟಿನಬೈಲು ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಕೊಂದು ಎಸೆದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಯಡಮೊಗೆ ಗ್ರಾಮದ ಸಾಲಿಮಕ್ಕಿಯ ಮಂಜುನಾಥ ಶೆಟ್ಟಿ, ಕಾವ್ರಾಡಿ ಗ್ರಾಮದ ಕಂಡ್ಲೂರು ನದೀಮ್ ಕರಣಿ ಹಾಗೂ ಯಡಮೊಗೆ ಗ್ರಾಮದ ಹಣೆಬಚ್ಚಲು ನಿವಾಸಿಗಳಾದ ನಾಗರಾಜ್ ಬೋವಿ ಮತ್ತು ವೆಂಕಟರಮಣ ಬೋವಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ನಾಲ್ಕು ಚಿರತೆಯ ಉಗುರುಗಳು, ಮೂಳೆಗಳ ತುಂಡುಗಳು, ಒಂದು ಬಂದೂಕು, ಐದು ಜೀವಂತ ಗುಂಡುಗಳು ಮತ್ತು ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 4ರಂದು ಸಿದ್ದಾಪುರ-ಶಿವಮೊಗ್ಗ ಜಿಲ್ಲಾ ರಸ್ತೆಯ ಸಮೀಪ ಚಿರತೆಯನ್ನು ಕೊಂದು ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಶಂಕರನಾರಾಯಣ ಅರಣ್ಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಮುಂದುವರಿಸಿದ ಅರಣ್ಯ ಅಧಿಕಾರಿಗಳು ಗುರುವಾರ ಪ್ರಮುಖ ಆರೋಪಿ ಮಂಜುನಾಥ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆಯಲ್ಲಿ ನೀಡಿದ ಮಾಹಿತಿಯ ಆಧಾರದ ಮೇಲೆ ಉಳಿದ ಮೂವರು ಆರೋಪಿಗಳನ್ನು ಬಂಧಿಸಲಾಯಿತು.
ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಬಂಧಿತ ಆರೋಪಿಗಳನ್ನು ಕುಂದಾಪುರ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುತ್ರನ್ ಪಿ. ಶಂಕರನಾರಾಯಣ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಮತ್ತು ಸಿಬ್ಬಂದಿ, ಬೈಂದೂರು ವಲಯದ ಸಿಬ್ಬಂದಿ ಹಾಗೂ ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಿರಂಜನ್ ಗೌಡ ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಕುಂದಾಪುರ ವಿಭಾಗದ ಹೆಚ್ಚುವರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರ ತಾಂತ್ರಿಕ ಸಹಾಯದೊಂದಿಗೆ ತನಿಖೆ ನಡೆಸಲಾಗಿದೆ.
