May 22, 2026
WhatsApp Image 2026-05-22 at 5.07.25 PM

ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ–1986ರ ಅನ್ವಯ ರಾಜ್ಯ ಸರ್ಕಾರದ ಅಧಿಸೂಚನೆ ಮೇರೆಗೆ ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯದ ಕರಾವಳಿ ಭಾಗಗಳಲ್ಲಿ ಜೂನ್ 1ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರಿಕಾ ನಿಷೇಧ ಜಾರಿಗೊಳಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರಕಾರ, ಯಾವುದೇ ಬಲೆಗಳು ಅಥವಾ ಮೀನುಗಾರಿಕಾ ಸಾಧನಗಳನ್ನು ಬಳಸಿಕೊಂಡು ಯಾಂತ್ರೀಕೃತ ದೋಣಿಗಳ ಮೂಲಕ ನಡೆಸುವ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಜೊತೆಗೆ, 10 ಅಶ್ವಶಕ್ತಿ (ಎಚ್‌ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳಿಗೂ ಈ ನಿಷೇಧ ಅನ್ವಯವಾಗಲಿದೆ. ಆದರೆ, ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಎಚ್‌ಪಿ ವರೆಗಿನ ಮೋಟರೀಕೃತ ದೋಣಿಗಳು ಹಾಗೂ ಸಾಂಪ್ರದಾಯಿಕ ನಾಡದೋಣಿಗಳಿಗೆ ಕರಾವಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಹವಾಮಾನ ವೈಪರೀತ್ಯದ ಮುನ್ಸೂಚನೆ ನೀಡಿದಲ್ಲಿ, ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮೀನುಗಾರರಿಗೆ ತಿಳಿಸಲಾಗಿದೆ.

ಜೂನ್ 1ರಿಂದ ನಿಷೇಧ ಜಾರಿಗೆ ಬರುವ ಹಿನ್ನೆಲೆಯಲ್ಲಿ, ಎಲ್ಲಾ ಮೀನುಗಾರಿಕಾ ದೋಣಿಗಳು ಮೇ 31ರೊಳಗೆ ಬಂದರು ಪ್ರವೇಶ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಬಳಿಕ ಬಂದರು ಪ್ರವೇಶಿಸುವ ದೋಣಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಸರ್ಕಾರದ ಮೀನುಗಾರಿಕಾ ನಿಷೇಧ ಆದೇಶವನ್ನು ಉಲ್ಲಂಘಿಸುವ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ–1986ರಡಿ ವಿಧಿಸಲಾದ ದಂಡನೆಗಳಿಗೆ ಒಳಪಡುವುದಲ್ಲದೆ, ಒಂದು ವರ್ಷದ ಅವಧಿಗೆ ರಾಜ್ಯ ಸರ್ಕಾರದ ಮಾರಾಟ ತೆರಿಗೆ ರಹಿತ ಡೀಸಿಲ್ ಸೌಲಭ್ಯ ಪಡೆಯಲು ಅನರ್ಹರಾಗಲಿದ್ದಾರೆ. ಜಿಲ್ಲೆಯ ಕರಾವಳಿ ಭಾಗದ ಎಲ್ಲಾ ಮೀನುಗಾರರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಸರ್ಕಾರದೊಂದಿಗೆ ಸಹಕರಿಸುವಂತೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.