

ಉಡುಪಿ : ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದು ಸಾಬೀತಾಗಿದೆ. ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಉಡುಪಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಸಹಪಾಠಿಯ ವಿಡಿಯೋ ಚಿತ್ರೀಕರಣ ಮಾಡಿರುವುದು ದೃಢಪಟ್ಟಿದೆ.
ಆರೋಪಿ ವಿದ್ಯಾರ್ಥಿನಿಯರು ಗೆಳತಿಯ ವಿಡಿಯೋ ಮಾಡಲು ಹೋಗಿ ಬೇರೆ ಯುವತಿಯ ಖಾಸಗಿ ವಿಡಿಯೋ ಮಾಡಿರುವುದು, ಬಳಿಕ ಸಾಕ್ಷ್ಯ ನಾಶಮಾಡಲು ಮೊಬೈಲ್‌ನಲ್ಲಿದ್ದ ವಿಡಿಯೋ ಡಿಲೀಟ್ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರು 2023ರ ಜುಲೈ 18ರಂದು ಕಾಲೇಜಿನ ಶೌಚಾಲಯದಲ್ಲಿ ಗೆಳತಿಯ ವಿಡಿಯೋ ಮಾಡಿದ್ದರು. ಆದರೆ, ಆ ವಿಡಿಯೋದಲ್ಲಿ ಗೆಳತಿಯ ಬದಲಾಗಿ ಬೇರೆ ಯುವತಿ ಇರುವುದು ಅರಿವಿಗೆ ಬಂದಿದೆ. ಕೂಡಲೇ ವಿಡಿಯೋ ಡಿಲೀಟ್ ಮಾಡಿ ಸಂತ್ರಸ್ತೆಗೆ ವಿಡಿಯೋ ಮಾಡಿರುವ ವಿಚಾರ ತಿಳಿಸಿ ಕ್ಷಮೆಯಾಚಿಸಿದ್ದಾರೆ. ಬಳಿಕ ವಿಷಯ ಕಾಲೇಜಿನ ಆಡಳಿತ ಮಂಡಳಿಗೆ ಗೊತ್ತಾಗಿ, ವಿದ್ಯಾರ್ಥಿನಿಯರನ್ನು ವಿಚಾರಣೆಗೊಳಪಡಿಸಿದಾಗ ವಿಡಿಯೋ ಮಾಡಿರುವುದಾಗಿ ಒಪ್ಪಿಕೊಂಡು ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರು. ವಿದ್ಯಾರ್ಥಿನಿಯರ ಕೈಬರಹ ಹಾಗೂ ಕ್ಷಮಾಪಣಾ ಪತ್ರದ ಬರಹ ತಾಳೆಯಾಗುತ್ತಿದೆ ಎಂದು ಎಫ್‌ಎಸ್‌ಎಲ್ ವರದಿ ದೃಢೀಕರಿಸಿದೆ.