ಬೆಂಗಳೂರು: ವಿದ್ಯಾರ್ಥಿಯೋರ್ವ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರದಿಯಾಗಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಪವನ್ (19) ಎಂದು ಗುರುತಿಸಲಾಗಿದೆ.
ಈತ ಎಎಸ್ ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಸಂಜೆ ಕಾಲೇಜಿನಿಂದ ಹೆಗ್ಗನಹಳ್ಳಿ ಮನೆಗೆ ಬಂದ ಬಳಿಕ ಈತ ಮನೆಯಲ್ಲಿ ಬ್ಯಾಗ್ ಇಟ್ಟು ಸುಬ್ರಮಣ್ಯನಗರ ಮಿಲ್ಕ್ ಕಾಲೋನಿನ ಬಳಿ ಬಂದಿದ್ದಾನೆ. ನಂತರ ಮಿಲ್ಕ್ ಕಾಲೋನಿ ಮೈದಾನ ಸಮೀಪದ ಕಟ್ಟಡವೊಂದರಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಸುಬ್ರಮಣ್ಯನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ವಿದ್ಯಾರ್ಥಿ ಸಾವಿನ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ಮತ್ತು ಇತರೆ ಮೂಲಗಳಿಂದ ಸಾವಿನ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ.