May 23, 2026
tamilnadu-1

ಚೆನ್ನೈ: ಜನಿಸಿದ ಕೆಲವೇ ಗಂಟೆಗಳ ನವಜಾತ ಶಿಶುವನ್ನು ಸಾರ್ವಜನಿಕ ಶೌಚಾಲಯದೊಳಗೆ ಎಸೆದು ಹೋಗಿರುವ ಅಮಾನವೀಯ ಘಟನೆ ನಗರದ ಓಎಂಆರ್ ರಸ್ತೆಯ ಶೋಲಿಂಗನಲ್ಲೂರಿನಲ್ಲಿ ನಡೆದಿದೆ. ಸಕಾಲದಲ್ಲಿ ಸ್ಪಂದಿಸಿದ ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಯಿಂದಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಶೋಲಿಂಗನಲ್ಲೂರಿನ ಜಿಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಆರ್ಬಿಟ್ರೇಷನ್ ನ್ಯಾಯಾಲಯದ ಸಮೀಪವಿರುವ ಸರ್ಕಾರಿ ಸ್ವಾಮ್ಯದ ಮೊಬೈಲ್ ಶೌಚಾಲಯದ ಬಳಿ ಈ ದುರಂತ ಸಂಭವಿಸಿದೆ.

ಶುಕ್ರವಾರ ಇಲ್ಲಿನ ನೈರ್ಮಲ್ಯ ಕಾರ್ಮಿಕರೊಬ್ಬರು ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದಾಗ, ಶೌಚಾಲಯದ ಒಳಗಿನಿಂದ ಮಗುವೊಂದು ಸತತವಾಗಿ ಅಳುತ್ತಿರುವ ಧ್ವನಿ ಕೇಳಿಸಿದೆ. ಅನುಮಾನಗೊಂಡು ಒಳಗೆ ಹೋಗಿ ಹುಡುಕಾಟ ನಡೆಸಿದಾಗ, ಕೆಲವೇ ಗಂಟೆಗಳ ಹಿಂದೆ ಜನಿಸಿದ್ದ ಗಂಡು ಮಗುವನ್ನು ಅಲ್ಲಿ ಎಸೆಯಲಾಗಿರುವುದು ಕಂಡುಬಂದಿದೆ. ಮಗುವಿನ ಹೊಕ್ಕಳ ಬಳ್ಳಿಯೂ ಕೂಡ ಬೇರ್ಪಡದೆ ಹಾಗೆಯೇ ಇತ್ತು. ಇದನ್ನು ಕಂಡು ಆಘಾತಕ್ಕೊಳಗಾದ ಕಾರ್ಮಿಕ ತಕ್ಷಣವೇ ಚೆಮ್ಮಂಚೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಚೆಮ್ಮಂಚೇರಿ ಪೊಲೀಸ್ ಇನ್ಸ್‌ಪೆಕ್ಟರ್ ರಾಜಶೇಖರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ಅವರು, 108 ಆಂಬ್ಯುಲೆನ್ಸ್‌ಗಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡುವುದು ಬೇಡ ಎಂದು ತೀರ್ಮಾನಿಸಿದರು. ತಕ್ಷಣವೇ ಮಗುವನ್ನು ತಮ್ಮದೇ ಪೊಲೀಸ್ ವಾಹನದಲ್ಲಿ ಹೊತ್ತುಕೊಂಡು ಹತ್ತಿರದ ಖಾಸಗಿ ಆಸ್ಪತ್ರೆಗೆ ಧಾವಿಸಿದ್ದಾರೆ.

ಖಾಸಗಿ ಆಸ್ಪತ್ರೆಯ ವೈದ್ಯರು ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ತದನಂತರ ಹೆಚ್ಚಿನ ಮತ್ತು ಸೂಕ್ತ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಎಗ್ಮೋರ್‌ನಲ್ಲಿರುವ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಸದ್ಯ ಅಲ್ಲಿನ ತಜ್ಞ ವೈದ್ಯರ ನಿಗಾದಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿದಿದ್ದು, ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಚೆಮ್ಮಂಚೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಒಎಂಆರ್ ರಸ್ತೆ ಹಾಗೂ ನ್ಯಾಯಾಲಯದ ಆವರಣದ ಸುತ್ತಮುತ್ತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಮಗುವನ್ನು ಎಸೆದು ಹೋದ ಅಪರಿಚಿತ ಮಹಿಳೆ ಅಥವಾ ವ್ಯಕ್ತಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಖಾಕಿ ಉಡುಪಿನೊಳಗಿನ ಮಾನವೀಯತೆ ಮೆರೆದು, ಆಂಬ್ಯುಲೆನ್ಸ್‌ಗೆ ಕಾಯದೇ ಸ್ವಂತ ವಾಹನದಲ್ಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ ಇನ್ಸ್‌ಪೆಕ್ಟರ್ ರಾಜಶೇಖರ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

About The Author

Leave a Reply

Your email address will not be published. Required fields are marked *

You cannot copy content of this page.