May 23, 2026
WhatsApp Image 2026-05-23 at 12.57.14 PM

ಬೆಂಗಳೂರು: ಸಿಲಿಕಾನ್ ಸಿಟಿಯ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತ್ರಸ್ತೆ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತನ್ನ ಓದಿನ ವೆಚ್ಚಕ್ಕಾಗಿ ಅರೆಕಾಲಿಕ (ಪಾರ್ಟ್ ಟೈಮ್) ಕೆಲಸವನ್ನೂ ಮಾಡುತ್ತಿದ್ದಳು. ಈ ನಡುವೆ ಹೋಟೆಲ್ ಒಂದರ ಮಾರಾಟ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈನಾಸ್ ಎಂಬ ಬ್ರೋಕರ್ ಪರಿಚಯವಾಗಿದ್ದನು. ಹೋಟೆಲ್ ಯಶಸ್ವಿಯಾಗಿ ಮಾರಾಟವಾದ ಹಿನ್ನೆಲೆಯಲ್ಲಿ, ಅದರ ಖುಷಿಗಾಗಿ ಪಾರ್ಟಿ ನೀಡುವಂತೆ ಆರೋಪಿ ಹೈನಾಸ್ ಹೋಟೆಲ್ ಮಾಲೀಕರಲ್ಲಿ ಕೇಳಿಕೊಂಡಿದ್ದನು ಎನ್ನಲಾಗಿದೆ.

ಅದರಂತೆ ಮೇ 11ರಂದು ಹೋಟೆಲ್ ಮಾರಾಟದ ಸಂಭ್ರಮಾಚರಣೆಗಾಗಿ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಯುವತಿಯ ಸ್ನೇಹಿತರು ಊಟ ತರಲು ಹೊರಗಡೆ ಹೋಗಿದ್ದಾರೆ. ರೂಮಿನಲ್ಲಿ ಯುವತಿ ಒಂಟಿಯಾಗಿರುವುದನ್ನು ಗಮನಿಸಿದ ಆರೋಪಿ ಹೈನಾಸ್, ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಊಟ ತರಲು ಹೋಗಿದ್ದ ಸ್ನೇಹಿತರು ತಕ್ಷಣವೇ ವಾಪಸ್ ಬಂದಿದ್ದರಿಂದ ಯುವತಿ ಅಪಾಯದಿಂದ ಪಾರಾಗಿದ್ದಾಳೆ. ಇದರಿಂದ ಆಕ್ರೋಶಗೊಂಡ ಆರೋಪಿ ಮದ್ಯದ ಬಾಟಲಿ ಹಿಡಿದು ಎಲ್ಲರಿಗೂ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ನಡೆದ ಬಳಿಕ ಯುವತಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾಳೆ. ಆದರೆ ಇದನ್ನು ತಡೆಯಲು ಆರೋಪಿಗಳು ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ನಿರಂತರವಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ನಂತರದ ದಿನಗಳಲ್ಲಿ ಆರೋಪಿ ಹೈನಾಸ್ ಕುಮ್ಮಕ್ಕಿನಿಂದ ಬಂದ ಅಪರಿಚಿತ ವ್ಯಕ್ತಿಗಳ ಗುಂಪೊಂದು ಯುವತಿಯ ಸ್ನೇಹಿತರಾಗಿದ್ದ ಹೋಟೆಲ್ ಮಾಲೀಕರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಯುವತಿ ಆರೋಪಿಸಿದ್ದಾಳೆ.

ಈ ಎಲ್ಲಾ ದೌರ್ಜನ್ಯಗಳ ವಿರುದ್ಧ ಧೈರ್ಯ ಮಾಡಿ ಯುವತಿ ಮಡಿವಾಳ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಡಿವಾಳ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಸದ್ಯ ಪ್ರಮುಖ ಆರೋಪಿ ಹೈನಾಸ್‌ನನ್ನು ಹೆಡೆಮುರಿ ಕಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ತನಿಖೆ ಮುಂದುವರಿದಿದೆ.

About The Author

Leave a Reply

Your email address will not be published. Required fields are marked *

You cannot copy content of this page.