May 22, 2026
Untitled-5

ಉಡುಪಿ: ಸಾಮಾಜಿಕ ಜಾಲತಾಣವಾದ ಫೇಸ್ಬುಕ್‌ನಲ್ಲಿ ಪ್ರಕಟವಾದ ನಕಲಿ ಹೂಡಿಕೆ ಜಾಹೀರಾತನ್ನು ನಂಬಿ, ಲಿಂಕ್ ಕ್ಲಿಕ್ ಮಾಡಿದ ಉಡುಪಿಯ ಯುವಕರೊಬ್ಬರು ಬರೋಬ್ಬರಿ ₹1,85,000 ಹಣವನ್ನು ಕಳೆದುಕೊಂಡು ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಉಡುಪಿ ನಿವಾಸಿ ಶಿವಶಂಕರ ಎಂಬುವವರು ವಂಚನೆಗೊಳಗಾದ ಸಂತ್ರಸ್ತ,

ಕಳೆದ ಮಾರ್ಚ್ ತಿಂಗಳಿನಲ್ಲಿ ಸಂತ್ರಸ್ತ ಶಿವಶಂಕರ ಅವರು ತಮ್ಮ ಫೇಸ್ಬುಕ್ ಖಾತೆಯನ್ನು ವೀಕ್ಷಿಸುತ್ತಿದ್ದಾಗ ‘IIFL Capital Services and Investments’ ಎಂಬ ಆಕರ್ಷಕ ಹೂಡಿಕೆ ಜಾಹೀರಾತು ಕಾಣಿಸಿದೆ. ಹೆಚ್ಚಿನ ಲಾಭ ಗಳಿಸುವ ಆಸೆಯಿಂದ ಅವರು ಅದರಲ್ಲಿದ್ದ ‘Join’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಅವರು ನೇರವಾಗಿ ‘HO2—IIFL Capital Services Ltd Service Manager’ ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದಾರೆ.

ಗ್ರೂಪ್‌ನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಶಿವಶಂಕರ ಅವರನ್ನು ನಂಬಿಸಿ, ಟ್ರೇಡಿಂಗ್ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ. ತದನಂತರ ವಾಟ್ಸಾಪ್ ಮುಖಾಂತರ ‘DMAPLUS’ ಎಂಬ ಥರ್ಡ್ ಪಾರ್ಟಿ ಅಪ್ಲಿಕೇಶನ್ (Third Party Application) ಒಂದನ್ನು ಕಳುಹಿಸಿಕೊಟ್ಟು, ಅದನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡುವಂತೆ ಸೂಚಿಸಿದ್ದಾರೆ. ಆರೋಪಿಗಳ ಮಾತನ್ನು ನಂಬಿದ ಸಂತ್ರಸ್ತರು ಏಪ್ರಿಲ್ 3 ರಿಂದ ಏಪ್ರಿಲ್ 30 ರ ಅವಧಿಯಲ್ಲಿ ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ತಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಖಾತೆಯಿಂದ ಹಂತ ಹಂತವಾಗಿ ಒಟ್ಟು ₹1,85,000 ಹಣವನ್ನು ಟ್ರೇಡಿಂಗ್‌ನಲ್ಲಿ ಇನ್ವೆಸ್ಟ್ ಮಾಡಿದ್ದಾರೆ. ಆದರೆ, ಇನ್ವೆಸ್ಟ್ ಮಾಡಿದ ಹಣಕ್ಕೆ ಯಾವುದೇ ಲಾಭದ ಹಣವೂ ಸಿಗದೆ, ಅತ್ತ ಅಸಲು ಹಣವನ್ನೂ ವಾಪಸ್ ಪಡೆಯಲು ಸಾಧ್ಯವಾಗದಿದ್ದಾಗ ತಮಗೆ ಆನ್‌ಲೈನ್ ಮೂಲಕ ಮೋಸ ಮಾಡಿರುವುದು ಶಿವಶಂಕರ ಅವರಿಗೆ ಮನವರಿಕೆಯಾಗಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ಅವರು ದೂರು ನೀಡಿದ್ದು, ಆರೋಪಿಗಳ ವಿರುದ್ಧ ಅಪರಾಧ ಕ್ರಮಾಂಕ 65/2026, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(4) (ವಂಚನೆ) ಹಾಗೂ ಐಟಿ ಕಾಯ್ದೆ 66(D) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೆನ್ (CEN) ಸೈಬರ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.