
ಬಿ.ಸಿ.ರೋಡ್ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ‘ಕುಲಾಲ ಕ್ರೀಡೋತ್ಸವ2026’ ಮೇ 24ರಂದು ಪೊಸಳ್ಳಿ ಕುಲಾಲ ಭವನದ ವಠಾರದಲ್ಲಿ ಸಂಭ್ರಮ, ಸಡಗರಗಳೊಂದಿಗೆ ನಡೆಯಲಿದೆ. ಕ್ರೀಡಾಕೂಟಕ್ಕೆ ಉದ್ಯಮಿ ಶೋಭಾ ಜಯಪ್ರಕಾಶ್ ಚಾಲನೆ ನೀಡಲಿದ್ದು, ಸಭಾ ಕಾರ್ಯಕ್ರಮವನ್ನು ಎಚ್ಪಿಸಿಎಲ್ ಉದ್ಯೋಗಿ ನಾರಾಯಣ ಮೂಲ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ. ರಮೇಶ್ ಸಾಲಿಯಾನ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕೋ-ಆರ್ಡಿನೇಟರ್ ತೇಜಸ್ವಿರಾಜ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅನಿಲ್ದಾಸ್, ಉದ್ಯಮಿ ಸುಂದರ ಕುಲಾಲ್, ಉದ್ಯಮಿ ಹರಿಯಪ್ಪ, ಟೈಲರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಸುರೇಶ್ ಸಾಲಿಯಾನ್ ಹಾಗೂ ಬಿ.ಸಿ.ರೋಡ್ ರಕ್ತೇಶ್ವರಿ ದೇವಿ ದೇವಸ್ಥಾನದ ಅಧ್ಯಕ್ಷ ಮೋಹನ್ ಬಿ. ಭಾಗವಹಿಸಲಿದ್ದಾರೆ.
ಈ ಬಾರಿಯ ಕ್ರೀಡೋತ್ಸವದಲ್ಲಿ ಒಂದು ವರ್ಷದ ಪುಟಾಣಿಗಳಿಂದ ಹಿಡಿದು ಹಿರಿಯ ನಾಗರಿಕರ ತನಕ ಎಲ್ಲ ವಯೋಮಾನದವರಿಗೂ ವಿಶೇಷ ಆಟೋಟ ಸ್ಪರ್ಧೆಗಳು ಆಯೋಜಿಸಲಾಗಿದ್ದು, ದಿನಪೂರ್ತಿ ಕ್ರೀಡಾ ಸಂಭ್ರಮ ಕಳೆಗಟ್ಟಲಿದೆ. ಮಕ್ಕಳಿಗಾಗಿ ಮನರಂಜನಾ ಆಟಗಳು, ಯುವಕರಿಗಾಗಿ ಚುರುಕು ಮೂಡಿಸುವ ಸ್ಪರ್ಧೆಗಳು, ಮಹಿಳೆಯರಿಗಾಗಿ ವಿನೂತನ ಆಟಗಳು, ದಂಪತಿಗಳಿಗಾಗಿ ವಿಶೇಷ ಸ್ಪರ್ಧೆಗಳು ಹಾಗೂ ಹಿರಿಯರಿಗಾಗಿ ಸಂತಸ ತುಂಬುವ ಚಟುವಟಿಕೆಗಳು ಗಮನ ಸೆಳೆಯಲಿವೆ.
ಬಲೂನ್ ಗೇಮ್ಸ್, ಕ್ಪಾಪ್ ಬಾಲ್, ಒಂಟಿಕಾಲಿನ ಹಗ್ಗಜಗ್ಗಾಟ, ಐಸ್ಕ್ರೀಂ ತಿನ್ನುವ ಸ್ಪರ್ಧೆ, ಶೋಲ್ಡರ್ ಬಾಲ್ ಪಾಸಿಂಗ್, ಮುಂಡಾಸ್ ಕಟ್ಟುವ ಸ್ಪರ್ಧೆ, ತೆಂಗಿನಗರಿ ಮೊಡಯುವುದು, ಕಣ್ಣಾಮುಚ್ಚಾಲೆ, ಮಿನಿ ಕ್ರಿಕೆಟ್, ಕ್ರೇಜಿ ಗೇಮ್ಸ್ ಸೇರಿದಂತೆ ಸುಮಾರು ಎಂಬತಕ್ಕೂ ಅಧಿಕ ಆಟೋಟ ಸ್ಪರ್ಧೆಗಳು ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಲಿದ್ದು, ಸ್ಪರ್ಧಾಳುಗಳು ಹಾಗೂ ಪ್ರೇಕ್ಷಕರಿಗೆ ರಸದೌತಣ ಒದಗಿಸಲಿವೆ. ಸಮಾಜದ ಸದಸ್ಯರ ಪರಸ್ಪರ ಬಾಂಧವ್ಯ ವೃದ್ಧಿಸುವ ಹಾಗೂ ಕುಟುಂಬ ಸಮೇತರಾಗಿ ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ.
ಸಮಾಜದ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ ಕ್ರೀಡೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
