
ಬೆಂಗಳೂರು: ಹೆಬ್ಬಾಳ ಪೊಲೀಸರು ಬೃಹತ್ ಡ್ರಗ್ ಜಾಲವೊಂದನ್ನು ಭೇದಿಸಿದ್ದು, ದೆಹಲಿಯಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡ್ತಿದ್ದ ಗ್ಯಾಂಗ್ನ ಹೆಡೆಮುರಿ ಕಟ್ಟಿದ್ದಾರೆ. ಎಂಟು ಜನ ಆರೋಪಿಗಳನ್ನು ಅರೆಸ್ಟ್ ಮಾಡಿರುವ ಪೊಲೀಸರು, ಈ ಒಂದೇ ತಂಡದಿಂದ ಸುಮಾರು 34 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಈ ಜಾಲ ಮೂರು ಲೇಯರ್ಗಳಲ್ಲಿ ಕೆಲಸ ಮಾಡುತ್ತಿತ್ತು. ಮಾದಕ ವಸ್ತುಗಳ ಸಾಗಾಟಕ್ಕೆ ಆರೋಪಿಗಳು ನಾನಾ ದಾರಿಗಳನ್ನು ಕಂಡುಕೊಂಡಿದ್ದರು ಎಂಬುದು ಕೂಡ ತನಿಖೆ ವೇಳೆ ಗೊತ್ತಾಗಿದೆ.
ದೆಹಲಿಯಿಂದ ರೈಲಿನಲ್ಲಿ ಡ್ರಗ್ಸ್ ಸಾಗಿಸಿದ್ದ ಆರೋಪಿಗಳು ಅವನ್ನು ಸೀರೆ , ಐರನ್ ಮಾಡಲು ಬಳಸುವ ಟೇಬಲ್ ಮತ್ತು ಚೇರ್ಗಳಲ್ಲಿ ಅಡಗಿಸಿಟ್ಟು ತಂದಿದ್ದರು. ಗಿಫ್ಟ್ ರೀತಿಯಲ್ಲಿ ಪ್ಯಾಕ್ ಮಾಡಿ ಅವುಗಳಣ್ನ ಸಾಗಾಟ ಮಾಡಿದ್ದರು. ರೈಲಲ್ಲಿ ಸಾಗಿಸಿ ತಂದಿದ್ದ ಈ ಮಾದಕ ವಸ್ತುಗಳನ್ನು ಕಾರಿಗೆ ಶಿಫ್ಟ್ ಮಾಡುವ ವೇಳೆ ದಾಳಿ ನಡೆಸಿರುವ ಪೊಲೀಸರು 4 ಕೆಜಿ 300 ಗ್ರಾಂ ಎಂಡಿಎಂಎಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸರ್ಜಾಪುರದ ಮನೆಯೊಂದರಲ್ಲಿ ಬಾಕಿ ಡ್ರಗ್ಸ್ ಇಟ್ಟಿರುವ ಮಾಹಿತಿ ಸಿಕ್ಕ ಹಿನ್ನೆಲೆ ಬೆಂಗಳೂರಿನ ಪೆಡ್ಲರ್ ಮನ್ಸೂರ್ ನಿವಾಸದಲ್ಲಿ ದಾಳಿ ನಡೆಸಲಾಗಿತ್ತು. ರೇಡ್ ವೇಳೆ ಮನೆಯಲ್ಲಿ 10 ಕೆಜಿ ಎಂಡಿಎಂಎ ಪತ್ತೆಯಾಗಿದೆ. ಬಳಿಕ ಅಬ್ದುಲ್ ಸಮಾದ್ ನಿವಾಸದಲ್ಲಿಯೂ ಡ್ರಗ್ಸ್ ಇರುವ ಬಗ್ಗೆ ಮಾಹಿತಿ ಆಧಾರದಲ್ಲಿ ಆತನ ಹೆಣ್ಣೂರು ನಿವಾಸದಲ್ಲಿ ತಪಾಸಣೆ ನಡೆಸಿದಾಗ 3.5 ಕೆಜಿ ಎಂಡಿಎಂಎ ಸಿಕ್ಕಿದೆ. ಆ ಮೂಲಕ ಒಟ್ಟು 34 ಕೋಟಿ ಮೌಲ್ಯದ 17 ಕೆಜಿಗೂ ಹೆಚ್ಚಿನ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಇನ್ನು ಉತ್ತರ ಭಾರತ ಅಥವಾ ವಿದೇಶದಿಂದ ದೆಹಲಿಗೆ ಬರುತ್ತಿದ್ದ ಡ್ರಗ್ಸ್ನ ಅಲ್ಲಿಂದ ದೇಶದ ವಿವಿಧ ಭಾಗಕ್ಕೆ ಆರೋಪಿಗಳು ಸರಬರಾಜು ಮಾಡುತ್ತಿದ್ದರು. ಸೆನೆಗಲ್ನ ಡನ್ಫಾ ಗೆರಾಲ್ಡ್, ತಾಂಜೇನಿಯಾದ ಮೆಗ್ರಾತ್ ಮತ್ತು ನೈಜೀರಿಯಾ ಮೂಲದ ಒಬಿಯಾನಿಜ್ ರೀಟಾ ದೆಹಲಿಯ ಡೀಲರ್ಗಳಾಗಿದ್ದರೆ, ದೆಹಲಿ ಮೂಲದ ರೀನಾ ಯಾದವ್ , ದೆಬಶಿಶ್ ಬ್ಯಾನರ್ಜಿ ಮತ್ತು ಧೀರಜ್ ಬೆಂಗಳೂರಿನ ಟ್ರಾನ್ಸ್ಪೋರ್ಟರ್ಗಳಾಗಿ ಕೆಲಸ ಮಾಡುತ್ತಿದ್ದರು. ಮಂಗಳೂರು ಮೂಲದ ಬೆಂಗಳೂರು ನಿವಾಸಿಗಳಾಗಿರುವ ಮಹಮ್ಮದ್ ಮನ್ಸೂರ್ ಮತ್ತು ಅಬ್ದುಲ್ ಸಮಾದ್ ಬೆಂಗಳೂರಲ್ಲಿ ಪೆಡ್ಲರ್ಸ್ಗಳಾಗಿದ್ದರು ಎಂಬುದು ತಿಳಿದುಬಂದಿದೆ.
ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಐದು ಕೇಸ್ ದಾಖಲಾಗಿತ್ತು. ಈ ಸಂಬಂಧ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗ ವಿಚಾರಣೆ ವೇಳೆ ಡ್ರಗ್ಸ್ ಜಾಲದ ಮುಂದಿನ ಲೇಯರ್ ಪತ್ತೆಯಾಗಿತ್ತು. ಆ ಮಾಹಿತಿ ಅಧಾರದಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದೆಹಲಿ ಮತ್ತು ದೆಹಲಿ ಎನ್ಸಿಆರ್ನಲ್ಲಿ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇದಕ್ಕಾಗಿ ಹೆಬ್ಬಾಳ ಮತ್ತು ಉತ್ತರ ವಿಭಾಗದ ಸುಮಾರು ನಲವತ್ತು ಪೊಲೀಸರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ತಂಡ ಕಳೆದ ಒಂದು ತಿಂಗಳಿಂದ ಈ ಕುರಿತು ಕೆಲಸ ಮಾಡಿದ್ದು, ಡ್ರಗ್ಸ್ ಸರಬರಾಜು ಮಾಡುತ್ತಿದ್ದವರು ಮತ್ತು ಪೆಡ್ಲರ್ಸ್ಗಳನ್ನು ಹಂತ ಹಂತವಾಗಿ ಅರೆಸ್ಟ್ ಮಾಡಲಾಗಿದೆ.
