May 12, 2026
image (62)

ಬೆಳ್ತಂಗಡಿ: ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ರೋಗಿಯೊಬ್ಬರು ಆಸ್ಪತ್ರೆಯ ಹೊರ ವರಾಂಡದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಮೃತರನ್ನು ಪುದುವೆಟ್ಟು ಗ್ರಾಮದ ಪೆಲತ್ತಾಜೆ ನಿವಾಸಿ ಅಚ್ಯುತ (42) ಎಂದು ಗುರುತಿಸಲಾಗಿದೆ. ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಇವರು ಮೇ 10ರ ಭಾನುವಾರ ಮಧ್ಯಾಹ್ನ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಅಚ್ಯುತ ಅವರು ಸೋಮವಾರ ಮುಂಜಾನೆ ಸುಮಾರು 5 ಗಂಟೆಗೆ ಆಸ್ಪತ್ರೆಯಿಂದ ಒಂಟಿಯಾಗಿ ಹೊರಬಂದಿದ್ದರು. ಆಸ್ಪತ್ರೆಯ ಕಟ್ಟಡದ ಹಿಂಭಾಗದಲ್ಲಿರುವ ಡಯಾಲಿಸಿಸ್ ಕೇಂದ್ರದ ಬಳಿ ಅವರು ಕುಸಿದು ಬಿದ್ದು, ಅಲ್ಲಿಯೇ ಮೃತಪಟ್ಟಿದ್ದಾರೆ.

ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರು ಯಾರ ಗಮನಕ್ಕೂ ಬಾರದೆ ವಾರ್ಡ್‌ನಿಂದ ಹೊರಬರಲು ಹೇಗೆ ಸಾಧ್ಯ? ಸಿಬ್ಬಂದಿಯ ಬೇಜವಾಬ್ದಾರಿತನದಿಂದಲೇ ಈ ಸಾವು ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ಅಚ್ಯುತ ಅವರು ಅತ್ಯಂತ ಬಡ ಕುಟುಂಬದವರಾಗಿದ್ದಾರೆ. ಅವರ ಪತ್ನಿ ದಿನಗೂಲಿ ಕೆಲಸ ಮಾಡುತ್ತಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿಯ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.