
ಕಿನ್ನಿಗೋಳಿ : ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಮೇಳದ ಆರಂಭಕ್ಕೆ ಪೂರ್ವಭಾವಿಯಾಗಿ ಇಂದು(ನ.15) ಬಜಪೆಯಿಂದ ಕಟೀಲಿಗೆ ಏಳೂ ಮೇಳಗಳ ದೇವರ ವೈಭವದ ಮೆರವಣಿಗೆ ನಡೆಯಿತು.
ಮೆರವಣಿಗೆಗೆ ಕೇಂದ್ರ ಸಚಿವರು, ಸ್ವಾಮೀಜಿಗಳು, ಗಣ್ಯರು ಚಾಲನೆ ನೀಡಿದರು. ಬಜಪೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಕೃಷ್ಣ ಪಾಲೇಮಾರ್ ಸೇರಿದಂತೆ ಹಲವು ಮಂದಿ ಗಣ್ಯರು, ಕ್ಷೇತ್ರದ ಆಸ್ರಣ್ಣರು ಉಪಸ್ಥಿತರಿದ್ದರು.
ಮಧ್ಯಾಹ್ನ ಬಜಪೆ ಬಸ್ಸು ನಿಲ್ದಾಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದ್ದ ಮೆರವಣಿಗೆ ವೈವಿಧ್ಯಮಯ ಕಲಾ ಪ್ರಕಾರಗಳ ವೈಭವದೊಂದಿಗೆ ಕಟೀಲು ತಲುಪಿತು.
ಬಜಪೆಯಿಂದ ಚರ್ಚ್‌ವರೆಗೆ ಕಾಲ್ನಡಿಗೆ , ಅಲ್ಲಿಂದ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದವರೆಗೆ ವಾಹನ ಜಾಥಾ ನಡೆದು ಬಳಿಕ ಮತ್ತೆ ಕಟೀಲು ದೇವಳದವರೆಗೆ ಪಾದಯಾತ್ರೆ ನಡೆಯಿತು. ಕಟೀಲು ಮೇಳದ ಏಳೂ ಮೇಳಗಳ ದೇವರ ಕಿರೀಟ ಮತ್ತು ಪೂಜಾ ಸಾಮಗ್ರಿಗಳನ್ನು ಮೆರವಣಿಗೆಯಲ್ಲಿ ಒಯ್ಯಲಾಯಿತು. ಡೋಲು, ಚೆಂಡೆ, ತಾಸೆ, ಕೊಳಲು ವಾದ್ಯ, ಹುಲಿ ವೇಷ, ಕೊಂಬು, ನಾಗಸ್ವರಗಳು ಸಾಥ್ ನೀಡಿದವು.
ಕಲಶವನ್ನು ಹಿಡಿದು ಮಹಿಳಾ ತಂಡಗಳು, ಸಾಲಿಗ್ರಾಮ ಬ್ಯಾಂಡ್, ಹುಲಿ ವೇಷಗಳು, ಉಡುಪಿ ಚೆಂಡೆ, ಶೆಟ್ಟಿಗಾರ್ ಚೆಂಡೆ, ಕೊಂಬುಗಳು, ಶಂಖನಾದ, ಸಣ್ಣ ನಾಗಸ್ವರ ಹಾಗೂ ತಾಸೆ, ಶಿಬರೂರಿನ ಬೆಳ್ಳಿಯ ಕೊಂಬುಗಳು, ಸ್ಯಾಕ್ಸೋಪೋನ್ ಮತ್ತು ಡೋಲಕ್ ತಂಡ, ಕಟೀಲು ಲಿಂಗಪ್ಪ ಸೇರಿಗಾರ ಅವರ ವಾದ್ಯ ಬಳಿಕ ಕಟೀಲು ಮೇಳದ ದೇವರ 8 ಟ್ಯಾಬ್ಲೋಗಳು ಸಹಿತ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು. 16 ಭಜನಾ ತಂಡಗಳ 1500ರಷ್ಟು ಭಕ್ತರು ಭಜನೆಯಲ್ಲಿ ಪಾಲ್ಗೊಂಡರು. ಕಲಶ ಹಿಡಿದ ಮಹಿಳೆಯರ ತಂಡಗಳು, ದೇವಳದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿದರು.
