ಪುತ್ತೂರು: ಜೀಪೊಂದು ಬೈಕ್ ಗೆ ಢಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಡಕ್ಕೋಡಿ ಕಡ್ಯ ನಿವಾಸಿ ಲೋಕೇಶ್(48) ಮೃತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದಿಬಂದಿದೆ. ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ ಅವರು ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆ ಅವರು ಚಲಾಯಿಸುತ್ತಿದ್ದ ಬೈಕ್ ಗೆ ಜೀಪು ಢಿಕ್ಕಿ ಹೊಡೆದು, ಢಿಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು 50 ಮೀಟರ್ ದೂರದ ತನಕ ಬೈಕನ್ನು ಜೀಪ್ ಎಳೆದುಕೊಂಡು ಹೋಗಿದ್ದು,ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಲೋಕೇಶ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಪುತ್ತೂರು ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.