

ಮಂಗಳೂರು : ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ರಾತ್ರಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73ರ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಎದುರು ನಡೆದಿದೆ. ಮೃತರನ್ನು ಬೆಳ್ತಂಗಡಿಯ ಸಾವೊ ಮಹೇಶ್(20) ಎಂದು ಗುರುತಿಸಲಾಗಿದೆ. ಇವರು ಸಹ್ಯಾದ್ರಿ ಕಾಲೇಜಿನ ರೊಬೊಟಿಕ್ ವಿಭಾಗದ ವಿದ್ಯಾರ್ಥಿಯಾಗಿದ್ದರು. ಟ್ಯೂಷನ್ ತರಗತಿ ಮುಗಿಸಿಕೊಂಡು ಮಹೇಶ್, ಸಹಪಾಠಿ ಪ್ರಣಮ್ ಶೆಟ್ಟಿ ಜೊತೆ ಬೈಕ್‌ನಲ್ಲಿ ಮನೆಗೆ ತೆರಳಲು ಕಾಲೇಜು ಎದುರಿನ ಡಿವೈಡರ್ ಬಳಿ ಯುಟರ್ನ್ ಪಡೆದು ಮುಂದಕ್ಕೆ ಹೋಗುತ್ತಿದ್ದಾಗ ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಪರಿಣಾಮ ಬೈಕ್ ಸಮೇತ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಮಹೇಶ್ ಮೃತಪಟ್ಟಿದ್ದು, ಸವಾರ ಪ್ರಣಮ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.