ಚಿತ್ರದುರ್ಗ: ನಗರದ ರೇಣುಕಸ್ವಾಮಿ ಪತ್ನಿ ಸಹನಾ ನಗರದ ಕೀರ್ತಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದರು.
ರೇಣುಕಸ್ವಾಮಿ ಕೊಲೆಯಾದಾಗ ಸಹನಾ ಅವರು 5 ತಿಂಗಳ ಗರ್ಭಿಣಿಯಾಗಿದ್ದರು.
ಬೆಳಿಗ್ಗೆ 6.55ರ ಸಮಯದಲ್ಲಿ ಅವರಿಗೆ ಸಹಜ ಹೆರಿಗೆಯಾಗಿದ್ದು ತಾಯಿ- ಮಗು ಆರೋಗ್ಯವಾಗಿದ್ದಾರೆ.
ಜೆ.ಸಿ.ಆರ್. ರಸ್ತೆಯಲ್ಲಿರುವ ಕೀರ್ತಿ ಆಸ್ಪತ್ರೆ ವೈದ್ಯರು ಸಹನಾ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ಅವರು ವೈದ್ಯ ಡಾ.ಮಲ್ಲಿಕಾರ್ಜುನ್ ಅವರ ಆರೈಕೆಯಲ್ಲಿದ್ದರು.
ಸಹಜ ಹೆರಿಗೆಯಾಗಿದ್ದಕ್ಕೆ ಸಹನಾ ಕುಟುಂಬ ಸದಸ್ಯರು ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು.