May 15, 2025 12:15:19 AM
WhatsApp Image 2024-03-24 at 4.08.22 PM

ಉಡುಪಿ: ನಮ್ಮ ಯಾವುದೇ ಪ್ರಯತ್ನ ಫಲಿಸದಿದ್ದಾಗ, ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ ಮಾತ್ರ ನಮಗೆ ದೇವರ ನೆನಪಾಗುತ್ತದೆ. ಹಾಗಾಗ ಕೂಡದು. ಜನರು ದೇವಸ್ಥಾನಗಳಿಗೆ ನಿತ್ಯ ಬರುವಂತಾಗಬೇಕು ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಅಷ್ಟಬಂಧ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಶನಿವಾರ ಆಶೀರ್ವಚನ ನೀಡಿದರು.
ದೇವಸ್ಥಾನಗಳು ಶಾಂತಿ ನೆಮ್ಮದಿಯ ಪ್ರತೀಕವಾಗಿ ಇರುವಂಥದ್ದು. ಯಾವ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳು ಸರಿಯಾಗಿ ನಡೆಯುತ್ತಿದೆಯೋ ಆ ಊರಿನಲ್ಲಿ ನೆಮ್ಮದಿ ಇರುತ್ತದೆ ಎಂದರು.

ಕರ್ಮದ ಫಲ ಜಾಸ್ತಿ
ಸಾನ್ನಿಧ್ಯ ವಹಿಸಿದ್ದ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಒಂದೊಮ್ಮೆ ನಾವು ಬಯಸಿದ್ದು ಎಲ್ಲವೂ ನಮಗೆ ಸುಲಭದಲ್ಲಿ ಸಿಗುತ್ತಿದ್ದರೆ, ನಮ್ಮ ಇಚ್ಛೆಯ ಪ್ರಕಾರವೇ ಎಲ್ಲವೂ ನಡೆದರೆ ದೇವರ ಎಚ್ಚರ ನಮಗೆ ಬರುವುದಿಲ್ಲ. ದೇವರು ಇದ್ದಾರೆ ಎಂಬುದು ನಮಗೆ ತಿಳಿಯುವುದು ಹೇಗೆಂದರೆ ನಾವು ಎಷ್ಟೇ ಪ್ರಯತ್ನಪಟ್ಟರೂ ನಮಗೆ ಫಲ ಸಿಗದಿದ್ದಾಗ.
ಕರ್ಮದ ಫಲ ಎನ್ನುವಂಥದ್ದು ಪರಾಧೀನವಾಗಿದೆ, ದೇವರ ಕೈಯೊಳಗಿದೆ. ಈ ವ್ಯಕ್ತಿಗೆ ಇಷ್ಟೇ ಫಲ ಕೊಡಬೇಕು ಎಂದು ದೇವರ ಚಿತ್ತದಲ್ಲಿ ಇದ್ದಾಗ ಮಾತ್ರ ಆ ಕಾರ್ಯದಲ್ಲಿ ನಮಗೆ ಯಶಸ್ಸು ಸಿಗುತ್ತದೆ.


ಹಾಗಾಗಿ ದೇವರು ಇದ್ದಾರೆ ಎಂದು ಗೊತ್ತಾಗುವುದು ನಮ್ಮ ಪ್ರಯತ್ನ, ನಾವು ಇಚ್ಚೆಪಟ್ಟದ್ದು ಅದು ಪೂರ್ಣವಾಗದಾಗ. ನಾವು ದೇವರ ನಂಬಿಕೆಯಲ್ಲಿ ಸಾಗಿದಾಗ ಕರ್ಮದ ಫಲ ಜಾಸ್ತಿ ಸಿಗುತ್ತದೆ ಎಂದರು.
ವಿದ್ವಾಂಸ ಪಂಜ ಭಾಸ್ಕರ ಭಟ್ ಧಾರ್ಮಿಕ ಪ್ರವಚನ ನೀಡಿದರು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಜ್ಯೋತಿಷಿ ಹಯವದನ ಭಟ್, ಧರ್ಮಸ್ಥಳ ಎಸ್.ಕೆ.ಆರ್.ಡಿ.ಪಿ. ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಉಡುಪಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಪ್ರಶಾಂತ ಕುಮಾರ್ ಶೆಟ್ಟಿ, ಮಣಿಪಾಲ ಎಂ.ಐ.ಟಿ. ಪ್ರಾಧ್ಯಾಪಕ ಡಾl ಉದಯ ಕುಮಾರ್ ಶೆಟ್ಟಿ, ಕೊಡವೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಕಾರ್ತಿಕೇಯ ಭಟ್, ನಗರಸಭಾ ಸದಸ್ಯ ಶ್ರೀಶ ಭಟ್ ಕೊಡವೂರು, ಬಿ.ಪಿ. ರಮೇಶ್ ಪೂಜಾರಿ ಬಡಾನಿಡಿಯೂರು, ಕೊಲ್ಲೂರು ದೇವಳ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯೆ ಸಂಧ್ಯಾ ರಮೇಶ್, ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ ಮೂಲಿಗಾರ್, ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರು ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸುಮನಸಾ ಕೊಡವೂರು ಅವರಿಂದ ಶಿಕಾರಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

About The Author

Leave a Reply

Your email address will not be published. Required fields are marked *

<p>You cannot copy content of this page.</p>