ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 3 ವರ್ಷ 9 ತಿಂಗಳ ಮಗುವನ್ನು ಪೋಷಕರು ಗುರುವಾರ ಬೆಳಿಗ್ಗೆ ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿಗೆ ಹುಷಾರಿಲ್ಲ ಎಂದು ಚಿಕಿತ್ಸೆ ಕೊಡಿಸಲು ಕರೆತಂದಿದ್ದ ತಾಯಿ ಮಗುವಿನ ಮೈ ಮೇಲೆ ತೀವ್ರ ತರಹದ ಗಾಯ ಆಗಿರುವುದನ್ನು ಗಮನಿಸಿದ್ದಾರೆ. ಬಳಿಕ ಡಿಹೆಚ್‌ಓ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆಸ್ಪತ್ರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಭೇಟಿ ನೀಡಿದ್ದು ಇವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಮಗುವಿನ ಮೇಲಾದ ಗಾಯದ ಬಗ್ಗೆ ಪೋಷಕರು ಸ್ಪಷ್ಟ ಮಾಹಿತಿ ನೀಡಿಲ್ಲ ಅಥವಾ ಮಾಹಿತಿ ಅವರಿಗೆ ತಿಳಿದಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ ಮಗುವಿನಿಂದಲೂ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಸದ್ಯ ಘಟನೆ ಬಗ್ಗೆ ಪೊಲೀಸ್ ಇಲಾಖೆ ತನಿಖೆಗೆ ಮುಂದಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಚಕ್ಕರಮಕ್ಕಿ ಶೇಡಿಮನೆ ಎಂಬಲ್ಲಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.