ಉಡುಪಿ: ಜ್ಞಾನವನ್ನು ಕೊಡುವ ಒಂದು ವ್ಯವಸ್ಥೆಯೇ ಶಾಲೆ ಎಂದು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು. ಇಂದು ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಸ್ಪಂದನ ಸೇವಾ ಸಂಸ್ಥೆಯು ಏರ್ಪಡಿಸಿದ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ “ಯಶೋಮಾಧ್ಯಮ-2023” ಪ್ರಶಸ್ತಿ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಮಕ್ಕಳು ಅವರ ತಂದೆ ತಾಯಂದಿರು ಯಾವ ರೀತಿಯಲ್ಲಿ ಕಷ್ಟಪಟ್ಟಿದ್ದಾರೆಯೋ ಆ ಕಷ್ಟದಿಂದ ಮಕ್ಕಳು ಉನ್ನತ ಶಿಕ್ಷಣ ಪಡೆದು ತಂದೆ ತಾಯಿಯರಿಗಿಂತ ದೊಡ್ಡ ಮಟ್ಟಕ್ಕೆ ಬೆಳೆಯುವಂತಾಗಲಿ ಎಂದರು. 30-40 ವರ್ಷಗಳ ಹಿಂದೆ ಉತ್ತರ ಕರ್ನಾಟಕದವರು ಈ ಭಾಗಕ್ಕೆ ಕೆಲಸಕ್ಕೆ ಬಂದಾಗ ಅವರ ಮಕ್ಕಳನ್ನು ಶಾಲೆಗೆ ಕಳಿಸುತ್ತಿರಲಿಲ್ಲ. ಆ ಮಕ್ಕಳಿಗೆ ಶಿಕ್ಷಣ ಸಿಗುತ್ತಿರಲಿಲ್ಲ. ಆದರೆ ಇಂದು ಇಡೀ ಭಾರತ ದೇಶದಲ್ಲಿ ಅತ್ಯುತ್ತಮ ಶಿಕ್ಷಣ ಕೊಡುತ್ತಿರುವ ವ್ಯವಸ್ಥೆ ಇದ್ದರೆ ಅದು ದಕ್ಷಿಣದ ಉಡುಪಿ ಜಿಲ್ಲೆಯಲ್ಲಿ ಮಾತ್ರ.
ಬಾಗಲಕೋಟೆ ರಾಯಚೂರು, ಬಿಜಾಪುರದ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಇಲ್ಲಿ ಸಿಗುತ್ತದೆ. ನಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಕ್ಕಾಗಿ ಅಮೆರಿಕ ಇಂಗ್ಲೆಂಡ್ ಮುಂತಾದ ದೇಶಗಳಿಗೆ ಕಳಿಸುತ್ತೇವೆ. ಆದರೆ ಇವತ್ತು ಇಲ್ಲಿ ಉತ್ತರ ಕರ್ನಾಟಕದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರು ನಿಜವಾದ ಭಾಗ್ಯವಂತರು. ಅಂತಹ ಉತ್ತರ ಕರ್ನಾಟಕದ ಮಕ್ಕಳಿಗೆ ನಿಸ್ವಾರ್ಥತೆಯಿಂದ ವೆಂಕಟೇಶ್ ಪೈ ಅವರ ನೇತೃತ್ವದ ಸ್ಪಂದನ ಸೇವಾ ಸಂಸ್ಥೆಯು ಉಚಿತ ಪುಸ್ತಕಗಳನ್ನು ವಿತರಣೆ ಮಾಡುವುದರ ಮೂಲಕ ಉತ್ತಮ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ.
ಈ ನಿಸ್ವಾರ್ಥ ಸೇವೆಗೆ ಪುಣ್ಯಫಲ ದೇವರಿಂದ ಸದಾ ಸಿಗುತ್ತಿರಲಿ ಎಂದು ಹಾರೈಸುತ್ತೇನೆ ಎಂದರು. ಟಿ.ಎ.ಪೈಯವರು ಕುಟುಂಬಕ್ಕೆ ತುಂಬಾ ಹತ್ತಿರದವರು. 1962 ರಲ್ಲಿ ನಮ್ಮ ತಂದೆ ಎಂಎಲ್ಎ ಆಗಬೇಕಾದರೆ, ಟಿ.ಎ.ಪೈ ಅವರೇ ಮುಖ್ಯ ಕಾರಣ. ತಂದೆಯವರಿಗೆ ಚುನಾವಣೆಗೆ ನಿಲ್ಲಲು ಹೇಳಿದ್ದರು. ಹಾಗಾಗಿ ಅವರ ಮಾತನ್ನು ಕೇಳಿ ನಮ್ಮ ತಂದೆಯವರು ಅಂದು ಎಂಎಲ್ಎಗೆ ನಿಂತು ಎಂಎಲ್ಎ ಆಗಿದ್ದರು. ಅಂತಹ ಟಿ.ಎ.ಪೈಯವರು ಕಲಿತ ಈ ಶಾಲೆಗೆ ಬರುವಂತಹ ಭಾಗ್ಯ ಇಂದು ನಮ್ಮದಾಗಿದೆ ಎಂದರು.
ಹಾಗೆಯೇ ವೆಂಕಟೇಶ್ ಪೈಯವರು ಪತ್ರಕರ್ತರಾದ ಮೋಹನ್ ಉಡುಪರವರನ್ನು ಗುರುತಿಸಿ”ಯಶೋ ಮಾಧ್ಯಮ-2023″ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯವಾಗಿದೆ ಎಂದರು. ದೀಪ್ತಿ ಬಿಲ್ಡ್ ಪ್ರೊ ವೆಂಚರ್ಸ್ ನ ಆಡಳಿತ ನಿರ್ದೇಶಕರು ಹಾಗೂ ಸಮಾಜ ಸೇವಕರಾದ ಶಿರಿಯಾರ ಗಣೇಶ್ ನಾಯಕ್ ರವರು ಮಾತನಾಡಿ ಶಾಲೆ ಎಂದ ಕೂಡಲೆ ನೆನಪಿಗೆ ಬರುವುದು ಬಾಲ್ಯ. ಇಂದಿನ ಈ ಕಾರ್ಯಕ್ರಮ ಬಾಲ್ಯದ ನೆನಪುಗಳನ್ನು ನೆನಪಿಸಿತು.
ಟಿ.ಎ.ಪೈ., ಟಿ.ಎಂ.ಎ.ಪೈ ಯಂತವರು ಈ ಶಾಲೆಯಲ್ಲಿ ಓದಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಕನ್ನಡ ಶಾಲೆಯ ಅಭಿವೃದ್ಧಿ, ಶಾಲೆಗೆ ಮಕ್ಕಳು ಬರುವಂತೆ ಮಾಡುವ ಪ್ರಯತ್ನ, ಈ ಶಾಲೆಗೆ ಏನು ಅವಶ್ಯಕತೆ ಇದೆಯೋ ಅದನ್ನು ಸಮಾಜದಿಂದ ಕೊಡುವಂತಹ ಪ್ರಯತ್ನವನ್ನು ಸ್ಪಂದನಾ ಸೇವಾ ಸಂಸ್ಥೆ ಮಾಡುತ್ತಿದೆ.
ಉದ್ಯಾನ ವೀನ್ಯಾಸಗಾರರಾದ ಲೋಕೇಶ್ ಪೂಜಾರಿಯವರು ಮಾತನಾಡಿ ಉತ್ತರ ಕರ್ನಾಟಕ ಭಾಗದ ಶ್ರಮಿಕ ವರ್ಗದವರಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗಗಳ ಕನ್ನಡ ಶಾಲೆಗಳು ಉಳಿದಿವೆ. ಮಕ್ಕಳು ಮೊಬೈಲ್ ನಿಂದ ದೂರವಿದ್ದು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುತ್ತಾರೆ ಎಂದು ಹೇಳಿದರು.
ಪತ್ರಕರ್ತ ಜನಾರ್ದನ್ ಕೊಡವೂರು ರವರು ಮಾತನಾಡಿ ಸ್ಪಂದನಾ ಸೇವಾ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ ಶ್ಲಾಘಿಸಿದರು. “ಯಶೋ ಮಾಧ್ಯಮ-2023″ಪ್ರಶಸ್ತಿ ಪುರಸ್ಕೃತರಾದ ಬ್ರಹ್ಮಾವರ ತಾಲ್ಲೂಕು ವಿಜಯ ಕರ್ನಾಟಕ ವರದಿಗಾರರಾದ ಹೆಚ್. ಮೋಹನ್ ಉಡುಪರವರು ಮಾತನಾಡಿ ಸ್ಪಂದನಾ ಸೇವಾ ಸಂಸ್ಥೆಯು ನನ್ನನ್ನು ಗುರುತಿಸಿ” ಯಶೋ ಮಾಧ್ಯಮ-2023″ ಪ್ರಶಸ್ತಿ ನೀಡಿರುವುದು ಹಾಗೂ ಅದನ್ನು ಪ್ರಮೋದ್ ಮಧ್ವರಾಜ್ ಮತ್ತು ಶಿರಿಯಾರ ಗಣೇಶ್ ನಾಯಕ್ ರವರು ನೀಡಿರುವುದು ತುಂಬಾ ಸಂತೋಷವಾಗಿದೆ. ಹಾಗೆಯೇ ಜವಾಬ್ದಾರಿಯು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಬೇಕಾದ ಒಳ್ಳೆಯ ಕೆಲಸಗಳ ವರದಿಗಳ ಜವಾಬ್ದಾರಿ ಹೆಚ್ಚಾಗಿದೆ ಎಂದರು.
ಈ ಸಂದರ್ಭದಲ್ಲಿ ಮೋಹನ್ ಉಡುಪರವರ ಶ್ರೀಮತಿಯವರಾದ ವಿದ್ಯಾ, ಹಾಯ್ ಕರಾವಳಿ ದಿನಪತ್ರಿಕೆಯ ಸಂಪಾದಕರಾದ ರವೀಂದ್ರ, ಪೂರ್ಣಿಮಾ ಭಟ್, ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ಪೈ, ಕಾರ್ಯದರ್ಶಿಗಳಾದ ಸಂತೋಷ್ ಕಾಮತ್, ಜಂಟಿಕಾರ್ಯದರ್ಶಿಗಳಾದ ಶಿವಾನಂದ ಕಾಮತ್, ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಾರದ, ಹಿಂದಿನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗುಲಾಬಿ, ಅಧ್ಯಾಪಕ ವೃಂದದವರು, ಪೋಷಕರು ಉಪಸ್ಥಿತರಿದ್ದರು.