ಉಡುಪಿ: ಕಾಸರಗೋಡಿನ ಬದಿಯಡ್ಕದ ವೈದ್ಯ ಡಾ.ಕೃಷ್ಣಮೂರ್ತಿಯವರ ಶವ ಕುಂದಾಪುರ ರೈಲ್ವೇ ಟ್ರಾಕ್ ನಲ್ಲಿ ಪತ್ತೆಯಾಗಿದ್ದರ ಕುರಿತಾಗಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆಯವರ ನೇತೃತ್ವದಲ್ಲಿ ಕುಂದಾಪುರ ಪೋಲಿಸರು ನಡೆಸಿದ ತನಿಖೆ ಬಹುತೇಕ ಮುಕ್ತಾಯಗೊಂಡಿದೆ. ಈ ಪ್ರಕರಣ ಆತ್ಮಹತ್ಯೆ ಎಂದು ಬಹುತೇಕ ಖಚಿತವಾಗಿದೆ ಎಂದು ಪೋಲಿಸ್ ಉನ್ನತ ಮೂಲಗಳು ತಿಳಿಸಿವೆ. ಆದರೆ ಕಾಸರಗೋಡು ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ನವೆಂಬರ್ 8 ಮಧ್ಯಾಹ್ನ ಸುಮಾರು 12.30 ಕ್ಕೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ನಿಲ್ದಾಣದಿಂದ ಕುಂದಾಪುರಕ್ಕೆ ಪಯಣ ಬೆಳೆಸಿದ ವೈದರು, ಕುಂದಾಪುರ ಕೆ.ಎಸ್.ಆರ್.ಟಿ.ಸಿ ನಿಲ್ದಾಣದ ಶಾಸ್ತ್ರಿ ಸರ್ಕಲ್ ಗೆ ಆಗಮಿಸಿದ್ದಾರೆ. ಅಲ್ಲಿಂದ ಕುಂದಾಪುರದ ದ್ವಾರಕ ಹೋಟೆಲಿಗೆ ತೆರಳಿದ್ದ ವೈದ್ಯರು, ಸಂಜೆ 6 ರವರೆಗೆ ಕುಂದಾಪುರ ವಿವಿಧೆಡೆ ತೆರಳಿದ ಸಿಸಿಟಿವಿ ದೃಶ್ಯಗಳು ಪೋಲಿಸರಿಗೆ ದೊರಕಿದೆ ಎನ್ನಲಾಗಿದೆ. ಕೃಷ್ಣಮೂರ್ತಿಯವರು ಕಾಸರಗೋಡಿನಿಂದ ರೈಲಿನಲ್ಲಿ ಬಂದಿದ್ದರೋ ಅಥವಾ ಬಸ್ಸಿನಲ್ಲಿ ಬಂದಿದ್ದರೋ ಎಂಬ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಇದೀಗ ಅವರು ಬಸ್ಸಿನಲ್ಲಿ ಬಂದಿರುವುದು ಖಚಿತವಾಗಿದೆ. ಅದೇ ಪ್ರಕಾರ ಯಾರಾದರೂ ಅವರ ಜೊತೆ ಬಂದಿರಬಹುದು ಎಂಬ ಸಂಶಯ ಈ ಮೊದಲು ಇತ್ತು. ಆದರೆ ಅವರು ಏಕಾಂಗಿಯಾಗಿ ಓಡಾಡುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ದೇಹದ ಮೇಲಿದ್ದ ಅಂಗಿ ಬದಲಾವಣೆ: ಬದಿಯಡ್ಕದಿಂದ ವೈದ್ಯರು ಹಾಕಿಕೊಂಡು ಬಂದಿರುವ ಅಂಗಿಯು, ನ. 9 ರಂದು ಮೃತದೇಹ ಪತ್ತೆಯಾದಾಗ ದೊರಕಿದ ಅಂಗಿಗೆ ಹೋಲಿಕೆ ಇಲ್ಲ. ಅವರನ್ನು ಅಂಗಿಯನ್ನು ಬದಲಾಯಿಸಿ ಆತ್ಮಹತ್ಯೆ ಮಾಡಿಕೊಂಡರೇ ಎಂಬುದರ ಕುರಿತಾಗಿ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ವೈದ್ಯರು ತಂದಿದ್ದ ಬ್ಯಾಗ್ ಪತ್ತೆಯಾಗಿಲ್ಲ. ವಾಚ್ ಮತ್ತು ಬೆಲ್ಟ್ ಪ್ರತ್ಯೇಕವಾಗಿ ದೊರಕಿದ್ದು, ವೈದ್ಯರೇ ತೆಗೆದಿಟ್ಟರೇ ಎಂಬುದು ಖಚಿತಗೊಂಡಿಲ್ಲ. ವೈದ್ಯರು ಹಾಕಿಕೊಂಡು ಬಂದಿರುವ ಅಂಗಿಯೂ ನಾಪತ್ತೆಯಾಗಿದ್ದು, ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.
ಇಬ್ಬರು ಪ್ರಮುಖ ಸಾಕ್ಷಿ: ವೈದ್ಯ ಕೃಷ್ಣಮೂರ್ತಿಯವರು ಕುಂದಾಪುರ ಶಾಸ್ತ್ರಿ ಸರ್ಕಲ್ ನಿಂದ ಕುಂದಾಪುರ ರೈಲ್ವೇ ಸ್ಟೇಷನ್ ಗೆ ತೆರಳುವ ದಾರಿಯನ್ನು ಇಬ್ಬರಲ್ಲಿ ವಿಚಾರಿಸಿದ್ದು, ಈ ಬಗ್ಗೆ ಪೋಲಿಸ್ ತನಿಖೆಯಲ್ಲಿ ಮಾಹಿತಿ ಲಭಿಸಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯ ಡಾ.ಕೃಷ್ಣಮೂರ್ತಿಯವರ ಶವದ ಮರಣೋತ್ತರ ಪರೀಕ್ಷೆ ನಡೆದಿದ್ದು ಇದರ ಅಂತಿಮ ವರದಿ ಇನ್ನಷ್ಟೇ ಪೊಲೀಸರ ಕೈ ಸೇರಬೇಕಾಗಿದೆ. ವೈಜ್ಞಾನಿಕ ವರದಿ ಬಂದ ನಂತರವಷ್ಟೇ ಈ ಸಾವಿನ ಬಗ್ಗೆ ಒಂದು ಖಚಿತತೆ ಮೂಡಲು ಸಾಧ್ಯ. ಭೂವಿವಾದಕ್ಕೆ ಸಂಬಂಧಪಟ್ಟಂತೆ ಮಹಿಳೆಯೊಬ್ವರನ್ನು ಉಪಯೋಗಿಸಿಕೊಂಡು ಕೃಷ್ಣಮೂರ್ತಿ ಅವರನ್ನು ಟ್ರಾಪ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಕಾಸರಗೋಡು ಪೊಲೀಸರು ಈಗಾಗಲೇ ಐವರನ್ನು ವಶಕ್ಕೆ ಪಡೆದಿದ್ದಾರೆ.