December 5, 2025
nccarny_090625_1
ಉಡುಪಿ, ಜೂ. 09 : ಸಾಧಿಸುವ ಛಲವೊಂದಿದ್ದರೆ ಸಾಕು ಯಾವುದೇ ಮಹತ್ವಾಕಾಂಕ್ಷೆಯ ಕನಸುಗಳನ್ನು ನನಸಾಗಿಸಿಕೊಳ್ಳುವುದು ಕಷ್ಟವಲ್ಲ ಎಂಬುದನ್ನು ಉಡುಪಿ ಜಿಲ್ಲೆಯ ಒಂದು ಪುಟ್ಟ ಗ್ರಾಮದ ಯುವತಿಯೊಬ್ಬಳು ಸಾಬೀತುಪಡಿಸಿದ್ದಾರೆ. ಪೆರ್ಣಂಕಿಲ ಎಂಬ ಪುಟ್ಟ ಗ್ರಾಮದ ಸದಾನಂದ ನಾಯಕ್ ಮತ್ತು ಜಯಶ್ರೀ ತೆಂಡೂಲ್ಕರ್ ದಂಪತಿಯ ಪುತ್ರಿ ಸೀಮಾ ತೆಂಡೂಲ್ಕರ್, ಭಾರತೀಯ ನೌಕಾಪಡೆಯಲ್ಲಿ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಬಾಲ್ಯದಿಂದಲೇ ಸೀಮಾ ಅವರು ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಬೇಕೆಂಬ ಕನಸು ಕಂಡಿದ್ದರು. ಅದನ್ನೇ ಬದುಕಿನ ಗುರಿಯಾಗಿಸಿಕೊಂಡಿದ್ದ ಸೀಮಾ ಅವರು, ತಮ್ಮ ಬಾಲ್ಯದ ಆಕಾಂಕ್ಷೆಯನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಿರಿಯಡಕದ ಖಾಸಗಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ನಂತರ ಕಾರ್ಕಳದ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.ಇಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿದರೂ, ಮನಸ್ಸು ಇದ್ದದ್ದು ಭಾರತೀಯ ಸೇನೆ ಕಡೆಗೆ. ಸಶಸ್ತ್ರ ಪಡೆಗಳು ನಡೆಸಿದ ನೇರ ಸಂದರ್ಶನವನ್ನು ಯಶಸ್ವಿಯಾಗಿ ಪೂರೈಸಿದ ಅವರು, ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾದರು. ಪ್ರಸ್ತುತ ಅವರು ಕೇರಳದ ಭಾರತೀಯ ನೌಕಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸೀಮಾ ಅವರ ತಂದೆ ಕೃಷಿಕರಾಗಿದ್ದು, ಅವರ ತಾಯಿ ಖಾಸಗಿ ಶಾಲೆಯೊಂದರಲ್ಲಿ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡ ಸೀಮಾ, 2022ರಲ್ಲಿ ಗಣರಾಜ್ಯೋತ್ಸವ ಪರೇಡ್‌ನ ಗಾರ್ಡ್ ಆಫ್ ಆನರ್ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.”ನನಗೆ ಚಿಕ್ಕಂದಿನಿಂದಲೂ ಭಾರತೀಯ ಸೇನೆಯನ್ನು ಸೇರಬೇಕೆಂಬ ಆಸೆ ಇತ್ತು. ಅದಕ್ಕಾಗಿಯೇ ನಾನು ಎನ್‌ಸಿಸಿಗೆ ಸೇರಿದೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದಾಗ ನನ್ನ ಆಸೆ ಮತ್ತಷ್ಟು ದೊಡ್ಡದಾಯಿತು. ನನ್ನ ಕನಸು ನನಸಾಗಿರುವುದರಿಂದ ನಾನು ಅತ್ಯಂತ ಸಂತೋಷವಾಗಿದ್ದೇನೆ” ಎಂದು ಸೀಮಾ ತೆಂಡೂಲ್ಕರ್ ತಿಳಿಸಿದ್ದಾರೆ

About The Author

Leave a Reply

Your email address will not be published. Required fields are marked *

You cannot copy content of this page.