ಮಣಿಪಾಲ: ಉಡುಪಿಯ ಮಣಿಪಾಲದಲ್ಲಿ ಮತ್ತೆ ನೆತ್ತರು ಹರಿದಿದೆ. ಹೋಟೆಲ್ ಕಾರ್ಮಿಕನನ್ನು ಯಾರೋ ಆಗಂತುಕರು ಬಿಯರ್ ಬಾಟಲಿಯಿಂದ ಚುಚ್ಚಿ ಚುಚ್ಚಿ ಕೊಲೆಗೈದಿದ್ದಾರೆ. ಕೊಲೆಯಾದ ಜಾಗ ಹಲವು ನಿಗೂಢತೆಗಳಿಗೆ ಸಾಕ್ಷಿಯಾಗಿದೆ.
ಹತ್ಯೆ ಮಾಡಿದ ಆರೋಪಿಗಳಿಗಾಗಿ ತಲಾಶ್ ಆರಂಭವಾಗಿದೆ. ಶುಕ್ರವಾರ ಬೆಳ್ಳಂಬೆಳಗ್ಗೆ ಮಣಿಪಾಲದಲ್ಲಿ ಜಾಗಿಂಗ್ ಮಾಡುತ್ತಿದ್ದವರಿಗೆ ಶಾಕ್ ಎದುರಾಗಿತ್ತು.ರಸ್ತೆ ಬದಿ ರಕ್ತ ಸಿಕ್ತವಾಗಿ ಬಿದ್ದಿದ್ದ ಮಧ್ಯ ವಯಸ್ಕ ಪುರುಷನೋರ್ವನ ಮೃತ ದೇಹ ಕಂಡು ಜನ ಹೌಹಾರಿದ್ದಾರೆ. ಮೃತ ದೇಹದ ಪಕ್ಕದಲ್ಲೇ ಒಡೆದ ಬಿಯರ್ ಬಾಟಲಿ ಪತ್ತೆಯಾಗಿದೆ .ಇದೇ ಬಾಟಲಿಯನ್ನು ಒಡೆದು ಆತನ ಕತ್ತಿಗೆ ತಿವಿದು ತಿವಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮಣಿಪಾಲದ ಅನಂತ ಕಲ್ಯಾಣ ನಗರದಲ್ಲಿ ಈ ಘಟನೆ ನಡೆದಿದೆ .
ಹೋಟೆಲ್ ಕಾರ್ಮಿಕ ಶ್ರೀಧರ ಕಾಸರಗೋಡು ಕೊಲೆಯಾದ ವ್ಯಕ್ತಿ .ಈತ ಮೂಲತಃ ಕೇರಳದ ಕಾಸರಗೋಡು ನಿವಾಸಿ. ಶ್ರೀಧರ್ ಮೃತದೇಹದ ಮೇಲೆ ಆತನ ಬ್ಯಾಗ್ ಹಾಗೆಯೇ ಇದೆ .ಸದ್ಯ ಪ್ರಕರಣ ತೀವ್ರ ಅನುಮಾನಗಳಿಗೆ ಕಾರಣವಾಗಿದ್ದು ಪೊಲೀಸರು ಆರೋಪಿಗಳಿಗಾಗಿ ತಲಾಶ್ ಆರಂಭಿಸಿದ್ದಾರೆ.