March 4, 2026
WhatsApp Image 2026-01-03 at 9.30.35 AM

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿ ನಡೆದ ಮನೆ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕುಖ್ಯಾತ ಅಂತರ್‌ರಾಜ್ಯ ಹಾಗೂ ಅಂತರ್‌ಜಿಲ್ಲಾ ಕಳ್ಳ ಉಮೇಶ್ ಬಳೆಗಾರ @ ಉಮೇಶ್ ಪಿ @ ಉಮೇಶ್ ರೆಡ್ಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಪ್ರಸ್ತುತ ಮಲ್ಲಾರು ಫಕೀರನಕಟ್ಟೆ ನಿವಾಸಿ ಉಮೇಶ್ ಬಳೆಗಾರ @ ಉಮೇಶ್ ಪಿ @ ಉಮೇಶ್ ರೆಡ್ಡಿ (47) ಎಂದು ಗುರುತಿಸಲಾಗಿದೆ

ಡಿಸೆಂಬರ್ 4, 2025ರಂದು ಹಗಲು ವೇಳೆ ಮಲ್ಲಾರು ಗ್ರಾಮದ ರಾಮನಾಥ ಕೃಪಾ ಎಂಬ ಮನೆಯ ನಿವಾಸಿ ರಾಘವೇಂದ್ರ ಕಿಣಿ ಅವರು ಮನೆಗೆ ಹೊರಗಿನಿಂದ ಬೀಗ ಹಾಕಿ ಕೀಲಿಯನ್ನು ವಿದ್ಯುತ್ ಮೀಟರ್ ಬಾಕ್ಸ್‌ನಲ್ಲಿ ಇಟ್ಟು ತೆರಳಿದ್ದರು. ಈ ಸಂದರ್ಭ ಕಳ್ಳರು ಮೀಟರ್ ಬಾಕ್ಸ್‌ನಲ್ಲಿದ್ದ ಕೀಲಿಯನ್ನು ಬಳಸಿ ಮನೆ ಬಾಗಿಲು ತೆರೆದು ಒಳಗಿನಿಂದ ಲಾಕ್ ಮಾಡಿಕೊಂಡು, ಬೆಡ್‌ರೂಂನ ಕಪಾಟಿನಲ್ಲಿ ಇಟ್ಟಿದ್ದ ಸುಮಾರು ₹3.90 ಲಕ್ಷ ಮೌಲ್ಯದ 72 ಗ್ರಾಂ ಚಿನ್ನದ ಆಭರಣಗಳು ಹಾಗೂ ಸುಮಾರು ₹1,500 ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳವು ನಡೆದ ವಿಧಾನವನ್ನು ಆಧರಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್, ನಿಕಟ ಪೂರ್ವ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಹಾಗೂ ಪ್ರಭಾರ ಕಾರ್ಕಳ ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಪ್ರಭು ಡಿ.ಟಿ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ಕೈಗೊಳ್ಳಲಾಯಿತು. ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಜಿ ಅವರ ನೇತೃತ್ವದ ತಂಡವು ಚಾಣಾಕ್ಷತನದಿಂದ ಆರೋಪಿಯನ್ನು ಪತ್ತೆ ಹಚ್ಚಿ, ಜನವರಿ 2, 2026ರಂದು ಬಂಧಿಸಿ ತನಿಖೆ ನಡೆಸುತ್ತಿದೆ.

ಬಂಧಿತ ಉಮೇಶ್ ಬಳೆಗಾರ ವಿರುದ್ಧ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 16 ಪ್ರಕರಣಗಳು ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸುಮಾರು 8 ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಯಾಗಿದೆ. ಕೇರಳದ ತನ್ನಿಪಲಂ, ಮಾವೂರು, ತ್ರಿಶೂರ್ ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ, ಪುತ್ತೂರು ನಗರ, ಮೂಡಬಿದ್ರೆ, ಉತ್ತರ ಕನ್ನಡ ಜಿಲ್ಲೆಯ ಶಿರ್ಸಿ ಗ್ರಾಮಾಂತರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಠಾಣೆಗಳಲ್ಲಿ ಜಾಮೀನುರಹಿತ ಬಂಧನ ವಾರಂಟ್‌ಗಳು ಜಾರಿಯಾಗಿವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಠಾಣೆಯ ಪ್ರಕರಣದಲ್ಲಿ ಎಲ್.ಪಿ.ಸಿ ವಾರಂಟ್ ಜಾರಿಯಲ್ಲಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಯ ಎರಡು ಪ್ರಕರಣಗಳಲ್ಲಿ  ನ್ಯಾಯಾಲಯವು ಪ್ರೊಕ್ಲಮೇಶನ್ ಹೊರಡಿಸಿದೆ.

ಈ ಕಾರ್ಯಾಚರಣೆಯಲ್ಲಿ ಪಡುಬಿದ್ರೆ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಕುಮಾರ್ ಟಿ. ನಾಯ್ಕ, ಶುಭಕರ (ಪಿ.ಎಸ್.ಐ ಕಾಪು), ರಾಜೇಶ್ (ಎ.ಎಸ್.ಐ ಪಡುಬಿದ್ರೆ), ಮೋಹನಚಂದ್ರ, ರಘು, ಜೀವನ್, ಜೀಪು ಚಾಲಕ ಜಗದೀಶ್ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಮತ್ತು ನಿತಿನ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.