ಧಾರವಾಡ: ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಒಡೆತನದ ಸಹಕಾರಿ ಬ್ಯಾಂಕ್ ಗೆ ಖದೀಮರು ನುಗ್ಗಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಯುವರಾಜ ರಾಂಪುರ ಹಾಗೂ ವೈಷ್ಣವಿ ಶಾಹೀನ್ ಎಂದು ಗುರುತಿಸಲಾಗಿದೆ. ಯುವರಾಜ ರಾಂಪುರ ಬ್ಯಾಂಕ್ ನ ಮಾಜಿ ಉದ್ಯೋಗಿಯಾಗಿದ್ದು, ವೈಷ್ಣವಿ ಬ್ಯಾಂಕ್ ನ ನಿರ್ದೇಶಕರ ಮಗಳು ಎಂದು ತಿಳಿದು ಬಂದಿದೆ. ಇವರಲ್ಲದೇ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಯೂಟ್ಯೂಬ್ ವಿಡಿಯೋ ನೋಡಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ ಖದೀಮರು ದರೋಡೆ ಮಾಡಿ ಬ್ಯಾಂಕ್ ನ ಸಿಸಿ ಕ್ಯಾಮೆರಾ ಸುಟ್ಟು ಹಾಕಿದ್ದಾರೆ. ಆರೋಪಿಗಳಿಂದ 17.90 ಲಕ್ಷ ನಗದು 615 ಗ್ರಾಂ ಚಿನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಈ ಪ್ರಕರಣವನ್ನು ಬೇಧಿಸಿದ ಶಹರ ಠಾಣೆ ಇನ್ಸ್ಪೆಕ್ಟರ್ ಪ್ರಭು ಗಂಗೇನಹಳ್ಳಿ ಹಾಗೂ ತಂಡಕ್ಕೆ ಪೊಲೀಸ್ ಆಯುಕ್ತ ರಮಣ್ ಗುಪ್ತಾ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಿದ್ದಾರೆ.
ಶ್ರೀ ಬೀರೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ ಹೊಸ ವರ್ಷದಂದೇ ಕಳ್ಳರು ಕೈ ಚಳಕ ತೋರಿಸಿದ್ದರು. ಜನವರಿ 1ರ ತಡರಾತ್ರಿ ಧಾರವಾಡದ ಕೋರ್ಟ್ ವೃತ್ತದ ಬಳಿ ಇರುವ ಬ್ಯಾಂಕ್ಗೆ ನುಗ್ಗಿದ ಖದೀಮರು ಬ್ಯಾಂಕ್ನಲ್ಲಿದ್ದ ಸುಮಾರು 20 ಲಕ್ಷ ನಗದು ಹಾಗೂ 40 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಹಾಗೂ ಯಾವುದೇ ಸಾಕ್ಷಿ ಸಿಗಬಾರದು ಎಂದು ಖದೀಮರು ಸಿಸಿಟಿವಿ ಹಾಗೂ ಬ್ಯಾಂಕ್ನಲ್ಲಿದ್ದ ದಾಖಲೆಗಳನ್ನು ಸುಟ್ಟು ಹಾಕಿದ್ದರು.