ಕಾರ್ಕಳದಲ್ಲಿ ತ್ರಿಕೋನ ಸ್ಪರ್ಧೆ: ಬಿಜೆಪಿಗೆ ಬಂಡಾಯದ ಬಿಸಿ, ಕಾಂಗ್ರೆಸ್‌ ಗೆಲುವಿನ ಕನಸು ಮತ್ತಷ್ಟು ಹಸಿ

ಉಡುಪಿ, ಏಪ್ರಿಲ್‌ 30: ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಈ ಹಿಂದಿನ ಚುನಾವಣೆಗಳಲ್ಲಿ ಹಿಂದುತ್ವವೇ ಬಿಜೆಪಿಗೆ ಶಕ್ತಿಯಾಗಿತ್ತು. ಆದರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಮುಖಂಡರೇ ಬಿಜೆಪಿಗೆ ಬಿಸಿ ತುಪ್ಪವಾಗಿದ್ದಾರೆ. ಕಳೆದ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 13 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಟಿಕೆಟ್‌ ಹಂಚಿಕೆಯಲ್ಲಿನ ಅಸಮಧಾನ ಕರಾವಳಿಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿಸಿದೆ.

ಈ ಬಾರಿ ಬಿಜೆಪಿ 13 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಮಣೆ ಹಾಕಿದೆ. ಜೊತೆಗೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿಂದೂತ್ವದ ಬಂಡಾಯದ ಕಾವು ಜೋರಾಗಿದೆ. ಪುತ್ತೂರಿನಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದೆ ಎಂಧು ಅಸಮಾಧಾನಗೊಂಡಿದ್ದ ಪ್ರಮೋದ್‌ ಮುತಾಲಿಕ್‌ ಬಿಜೆಪಿಗೆ ಗುಡ್‌ ಬೈ ಹೇಳಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಿರ್ಧರಿಸಿದ್ದರು. ಹಿಂದುತ್ವ ಸಿದ್ಧಾಂತಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಕಾರ್ಕಳ ಕ್ಷೇತ್ರದಲ್ಲಿ ಪ್ರಮೋದ್‌ ಮುತಾಲಿಕ್‌, ಸಚಿವ. ವಿ ಸುನೀಲ್‌ ಕುಮಾರ್‌ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ.

ಕರಾವಳಿ ಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬಿಲ್ಲವ ಸಮುದಾಯದ ಮುಖಂಡರಾಗಿರುವ ಸುನೀಲ್ ಕುಮಾರ್, 2004ರಲ್ಲಿ ಕಾರ್ಕಳ ಅಸೆಂಬ್ಲಿ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದರು. 2012ರಲ್ಲಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸುನೀಲ್, ಕಾಂಗ್ರೆಸ್ಸಿನ ಕೆ.ಜಯಪ್ರಕಾಶ್ ಹೆಗಡೆ ವಿರುದ್ದ ಸುಮಾರು 45ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

2008ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ ವಿರುದ್ದ 1,537 ಮತಗಳ ಅಂತರದಿಂದ ಸೋಲುಂಡಿದ್ದ ಸುನೀಲ್, ನಂತರದ 2013, 2018ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಬಸವರಾಜ ಬೊಮ್ಮಾಯಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಸಂಪುಟ ವಿಸ್ತರಣೆಯ ವೇಳೆ ಸುನೀಲ್ ಕುಮಾರ್, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿಜೆಪಿಗೆ ಬೆನ್ನುಲುಬಾಗಿದ್ದ ಹಿಂದೂತ್ವವೇ ಇಂದು ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯವಾಗಿದೆ. ಹಿಂದುತ್ವ ಸಿದ್ಧಾಂತಗಳ ನೆಲೆಯ ಇಬ್ಬರು ನಾಯಕರು ಪರಸ್ಪರ ಎದುರಾಳಿಗಳಾಗಿರುವುದರಿಂದ ಮತಗಳ ವಿಭಜನೆಯಾಗುವ ಸಾಧ್ಯತೆಯಿದ್ದು, ಇದರಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ಅನುಕೂಲವಾಗುವ ವಾತಾವರಣ ಕೂಡ ಇದೆ. ಇನ್ನು ಸ್ಥಳೀಯ ಬಿಜೆಪಿ ಮುಖಂಡರು ಕೆಲವು ದಿನಗಳ ಹಿಂದೆ ಪಕ್ಷ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿರುವುದು ಸುನೀಲ್ ಕುಮಾರ್‌ಗೆ ಇನ್ನೊಂದು ತಲೆನೋವಾಗಿದೆ.
ಸಚಿವ ವಿ.ಸುನೀಲ್ ಕುಮಾರ್ ಅವರನ್ನು ಸೋಲಿಸಲು ಕಾಂಗ್ರೆಸ್‌ ಕೂಡ ತಂತ್ರ ರೂಪಿಸಿದ್ದು, 1972 ರಿಂದ 1999 ರವರೆಗೆ ಕಾರ್ಕಳವನ್ನು ಪ್ರತಿನಿಧಿಸಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಆಪ್ತರಾಗಿದ್ದ ಉದ್ಯಮಿ, ಲೋಕೋಪಕಾರಿ ಮತ್ತು ಸಮಾಜ ಸೇವಕ ಮುನಿಯಾಲು ಉದಯ್ ಶೆಟ್ಟಿ ಅವರನ್ನು ಈಗ ಕಣಕ್ಕಿಳಿಸಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಇದ್ದು, ಈ ಬಾರಿ ಪ್ರಮೋದ್‌ ಮುತಾಲಿಕ್‌ ಸ್ಪರ್ಧೆ ಕಾರ್ಕಳದ ರಾಜಕೀಯ ಚಿತ್ರಣವನ್ನು ಬದಲಿಸಿದೆ. ಆದರೆ ಪ್ರಮೋದ್‌ ಮುತಾಲಿಕ್‌ ಪಾಳಯದಲ್ಲಿ ಕಂಡುಬಂದಿದ್ದ ಆರಂಭಿಕ ಉತ್ಸಾಹ ಸದ್ಯ ತಣ್ಣಗಾಗಿದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

ಹೀಗಾಗಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿರುವ ಮುನಿಯಾಲು ಉದಯ ಶೆಟ್ಟಿ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ನಡುವೆ ನೇರ ಚುನಾವಣಾ ಹಣಾಹಣಿ ನಡೆಯಲಿದೆ ಎನ್ನುವುದು ಕ್ಷೇತ್ರದ ಮತದಾರರ ಮಾತು. ಕಾರ್ಕಳ ವಿಧಾನಸಭಾ ಕ್ಷೇತ್ರ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾಗಿದ್ದು, ಬುದ್ಧಿವಂತರ ಜಿಲ್ಲೆಯ ಮತದಾರರ ಒಲವು ಯಾರತ್ತ ಇದೆ ಎನ್ನುವುದನ್ನು ಕಾದು ನೋಡಬೇಕಿದೆ.
– oneindia

Check Also

ಮಣಿಪಾಲ: ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಲಕ್ಷಾಂತರ ರೂ. ಹಣ ವರ್ಗಾವಣೆ

ಮಣಿಪಾಲ: ವ್ಯಕ್ತಿಯೊಬ್ಬರ ಖಾತೆಯಿಂದ ಮತ್ತೊಂದು ಖಾತೆಗೆ 2,08,004 ರೂ. ಹಣ ವರ್ಗಾವಣೆಗೊಂಡಿರುವ ಘಟನೆ ನಡೆದಿದೆ. ಕಾರ್ಕಳ ಪಳ್ಳಿ ನಿವಾಸಿ ಡಾ| ಗೋಪಿ ನಾಥ್‌ …

Leave a Reply

Your email address will not be published. Required fields are marked *

You cannot copy content of this page.