

ಬೆಂಗಳೂರು: ಜೂನ್ 1 ರಿಂದ ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಹೇಳಿದ್ದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿ ಕಾರಿದ್ದಾರೆ. ನಾವು ಕೊಟ್ಟಿರುವ ಭರವಸೆಗಳನ್ನು ಈಡೇರಿಸುವುದು ಶತಸಿದ್ಧ, ಆದರೆ ಬಿಜೆಪಿ ಕೊಟ್ಟಿರುವ ಎಷ್ಟು ಭರಸೆಗಳನ್ನು ಈಡೇರಿಸಿದೆ ಎಂದು ಪ್ರಶ್ನೆ ಮಾಡಿದರು.
ಐದು ಭರವಸೆಗಳನ್ನು ಕೊಟ್ಟಿರುವುದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಹಿಂದೆ ಮುಂದೆ ಯೋಚಿಸದೇ ಮಾತನಾಡಲ್ಲ, ಅವರು ಮಾತನಾಡಿದ್ದಾರೆ ಎಂದರೆ ಅದನ್ನು ಮಾಡುತ್ತಾರೆ ಎಂದು ಅರ್ಥ. ನೂರಕ್ಕೆ ನೂರರಷ್ಟು ಅನುಷ್ಠಾನ ಮಾಡ್ತೀವಿ, ಇದಕ್ಕೆ ಡೆಡ್‌ಲೈನ್ ಕೊಡಲು ನೀನು ಯಾರಪ್ಪಾ ಎಂದು ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದರು.
ಕೇಂದ್ರ ಬಿಜೆಪಿ ಸರ್ಕಾರ 2014ರಲ್ಲಿ ಘೋಷಣೆ ಮಾಡಿದ್ದ ಭರವಸೆಗಳು ಎಷ್ಟು ಈಡೇರಿವೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಬೇಕು ಎಂದು ಸವಾಲು ಹಾಕಿದರು. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡ್ತೀವಿ ಅಂದ್ರಲ್ಲ, ಮಾಡಿದ್ರಾ? 2022ರ ವೇಳೆಗೆ ರೈತರ ಆದಾಯ ಡಬಲ್ ಮಾಡ್ತೀವಿ ಅಂದ್ರಲ್ಲ ಮಾಡಿದ್ರಾ ಎಂದು ಪ್ರಶ್ನೆ ಮಾಡಿದರು.
ಮೈಸೂರಿನ ಜನತೆಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದ್ದೀರಾ? ಆದಾಯ ಅಲ್ಲ ಸಾಲಗಳನ್ನು 10 ರಿಂದ 20 ರಷ್ಟು ಜಾಸ್ತಿ ಮಾಡಿದ್ದೀರಾ ನೀವು. ದೇಶಾದ್ಯಂತ 150 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡ್ತೀವಿ ಅಂದಿದ್ರಿ ಅದು ಆಗಿದ್ಯಾ? ಪ್ರತಿಯೊಬ್ಬರಿಗೆ ಕುಡಿಯುವ ನೀರು ಕೊಡ್ತೀವಿ ಅಂದ್ರಲ್ಲಾ ಕೊಟ್ಟಿದ್ದೀರಾ? ನೀವೇನು ಮಾಡಿದ್ದೀರಾ ಅದು ಹೇಳಿ ಎಂದು ಪ್ರಶ್ನೆ ಮಾಡಿದರು.
ಪ್ರತಾಪ್ ಸಿಂಹ ಅವರಿಗೆ ನಾನು ನೇರವಾಗಿ ಸವಾಲು ಹಾಕುತ್ತಿದ್ದೇನೆ, ನನಗೆ ಈ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದರು. 2014ರಲ್ಲಿ ಗೆದ್ದಾಗ ನೀವು ಕೊಟ್ಟ ಭರವಸೆಗಳಲ್ಲಿ ಯಾವುದು ಈಡೇರಿಸಿದ್ದೀರಿ ಎಂದು ಪ್ರಶ್ನೆ ಮಾಡಿದರು. ಮೊದಲನೆಯದಾಗಿ ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಮಾಡುವುದಾಗಿ ಹೇಳಿದ್ರಿ. ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ತರ್ತೀನಿ ಅಂದ್ರಿ ಅದು ಎಲ್ಲಿಗೆ ಬಂದಿದೆ? ಮೈಸೂರು ಸ್ಯಾಟಲೈಟ್ ಟರ್ಮಿನಲ್ ಅನ್ನು 2017ರಲ್ಲೇ ಮುಗಿಸ್ತಿನಿ ಅಂದ್ರಿ ಅದು ಆಗಿದ್ಯಾ? ಎಂದು ಪ್ರಶ್ನೆಗಳ ಸರಮಾಲೆಯನ್ನು ಮುಂದಿಟ್ಟಿದ್ದಾರೆ.
ಮೈಸೂರಿಗೆ ಇಂಡಸ್ಟ್ರಿಯಲ್ ಕಾರಿಡಾರ್ ತರ್ತಿನಿ ಅಂದ್ರಿ ಎಲ್ಲಿ ತಂದಿದ್ದೀರಾ? ಟೂರಿಸಂ ನೆಟ್ವರ್ಕ್ ಮಾಡ್ತೀವಿ ಅಂದಿದ್ರಿ, ಮೈಸೂರಿನಲ್ಲಿ 22,900 ಕೋಟಿ ವೆಚ್ಚದಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಘಟಕ ಬರುತ್ತೆ ಅಂದಿದ್ರಿ ಅದು ಆಗಿಲ್ಲ. ರಿಂಗ್ ರಸ್ತೆ ಕಾಮಗಾರಿ ಮುಕ್ತಾಯವಾಗಿದ್ಯಾ? ತಾವು ದತ್ತು ತಗೊಂಡಿದ್ದ ಹಳ್ಳಿಗಳ ಸ್ಥಿತಿ ಏನು? ಎಂದರು. ಜೂನ್ 1ರಂದು ಇಷ್ಟು ಪ್ರಶ್ನೆಗಳನ್ನು ಇಟ್ಟುಕೊಂಡು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಸೇರಿಕೊಂಡು ನಿಮ್ಮ ಕಚೇರಿ ಬಳಿ ಬರುತ್ತಿದ್ದೇವೆ, ದಯವಿಟ್ಟು ನೀವು ಇಷ್ಟು ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು ಎಂದು ಪ್ರತಾಪ್ ಸಿಂಹ ಅವರಿಗೆ ಸವಾಲು ಹಾಕಿದ್ದಾರೆ.