
ಬೆಂಗಳೂರು : ಮುಂಬೈನಲ್ಲಿ ರೇಡಿಯೊ ಜಾಕಿ (RJ) ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ನಗರದ ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ ತಮ್ಮ ಫ್ಲ್ಯಾಟ್ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ 23 ರಂದು ನಡೆದಿದೆ. ಮುಂಬೈ ಮೂಲದ ಮನೀಷಾ ಪ್ರಸಾದ್ (48) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಹರ್ಷವರ್ಧನ್ ಸಿಂಗ್ ಬನ್ಸಾಲ್ ಎಂಬಾತನ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮನೀಷಾ ಪ್ರಸಾದ್ ಅವರು ಮುಂಬೈನಲ್ಲಿ ರೇಡಿಯೊ ಜಾಕಿಯಾಗಿದ್ದರು. ಕೌಟುಂಬಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ 2024 ರಲ್ಲಿ ಅವರು ತಮ್ಮ ಪತಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ (Divorce) ಪಡೆದಿದ್ದರು. ವಿಚ್ಛೇದನದ ಬಳಿಕ ಮುಂಬೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಿಮಾಚಲ ಪ್ರದೇಶ ಮೂಲದ ಹರ್ಷವರ್ಧನ್ ಸಿಂಗ್ ಬನ್ಸಾಲ್ ಎಂಬಾತನ ಪರಿಚಯವಾಗಿ, ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ನಂತರ ಇಬ್ಬರೂ ಲಿವ್-ಇನ್ ರಿಲೇಶನ್ಶಿಪ್ನಲ್ಲಿ (ಸಹಜೀವನ) ಇದ್ದರು ಎನ್ನಲಾಗಿದೆ.
ಕಿರುಕುಳ ತಾಳಲಾರದೆ ಬೆಂಗಳೂರಿಗೆ ಪಲಾಯನ:
ಸಹಜೀವನ ನಡೆಸುತ್ತಿದ್ದ ಅವಧಿಯಲ್ಲಿ ಪ್ರಿಯಕರ ಹರ್ಷವರ್ಧನ್ ಸಿಂಗ್ನಿಂದ ಮನೀಷಾ ಅವರಿಗೆ ತೀವ್ರ ಮಾನಸಿಕ ಕಿರುಕುಳ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಈ ಕಿರುಕುಳವನ್ನು ತಾಳಲಾರದೆ ಮನೀಷಾ ಅವರು ಪ್ರಿಯಕರನಿಂದ ದೂರವಿರಲು ನಿರ್ಧರಿಸಿ, ಕಳೆದ ಏಪ್ರಿಲ್ ತಿಂಗಳಷ್ಟೇ ಬೆಂಗಳೂರಿಗೆ ಬಂದಿದ್ದರು. ಇಲ್ಲಿನ ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಹೊಸದಾಗಿ ಫ್ಲ್ಯಾಟ್ ಒಂದನ್ನು ಖರೀದಿಸಿ, ಒಂಟಿಯಾಗಿ ವಾಸಿಸುತ್ತಿದ್ದರು.
ಬೆಳಕಿಗೆ ಬಂದ ದುರಂತ:
ಕಳೆದ ಕೆಲವು ದಿನಗಳಿಂದ ಮನೀಷಾ ಅವರು ಸಂಬಂಧಿಕರ ಫೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಸಂಬಂಧಿಕರು ಬೆಂಗಳೂರಿನ ಫ್ಲ್ಯಾಟ್ಗೆ ಬಂದು ಪರಿಶೀಲಿಸಿದಾಗ ಮನೀಷಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅಮೃತಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮೂರು ಪುಟಗಳ ಡೆತ್ನೋಟ್ ವಶಕ್ಕೆ:
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮನೀಷಾ ಅವರು ಮೂರು ಪುಟಗಳ ಸುದೀರ್ಘ ಮರಣಪತ್ರವನ್ನು (Death Note) ಬರೆದಿಟ್ಟಿದ್ದಾರೆ. ಅದರಲ್ಲಿ, “ನನ್ನ ಸಾವಿಗೆ ಹಿಮಾಚಲ ಪ್ರದೇಶದ ಹರ್ಷವರ್ಧನ್ ಸಿಂಗ್ ಬನ್ಸಾಲ್ ನೀಡಿದ ಕಿರುಕುಳವೇ ನೇರ ಕಾರಣ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಮೃತಹಳ್ಳಿ ಪೊಲೀಸರು ಮರಣಪತ್ರ ಹಾಗೂ ಮನೀಷಾ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಹರ್ಷವರ್ಧನ್ ಸಿಂಗ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
