ಕೊಪ್ಪಳದ ಕಾರಟಗಿ ತಾಲೂಕಿನ ಪನ್ನಾಪುರ ಹತ್ತಿರದ ಬಸವಣ್ಣ ಕ್ಯಾಂಪ್‍ನಲ್ಲಿ ಸಂಕ್ರಮಣ ನಿಮಿತ್ತ ಕೋಳಿ ಕಾಳಗ ನಡೆದಿತ್ತು. ಮಂಗಳವಾರ ಸಂಜೆ ಜೂಜು ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ಯಾವೊಬ್ಬ ಗ್ಯಾಂಬ್ಲರ್ ಅನ್ನು ಬಂಧಿಸಿಲ್ಲ. ಬದಲಾಗಿ ಹುಂಜಗಳು ಸಿಕ್ಕಿದ್ದು, ಜೊತೆಗೆ ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಸಿಕ್ಕಿರುವ ಹುಂಜಗಳನ್ನು ಕರೆತಂದಿರುವ ಪೊಲೀಸರು ಸೆಲ್‌ನಲ್ಲಿ ಇಟ್ಟಿದ್ದಾರೆ. ದಾಳಿ ವೇಳೆ ಜೂಜುಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಸಬೂಬು ಹೇಳಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬದ ನೆಪದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಡೆ ನಿಷೇಧಿತ ಕೋಳಿ ಕಾಳಗ ನಡೆಸಲಾಗುತ್ತದೆ. ಕೋಳಿ ಕಾಳಗಕ್ಕೆ ಕೋಟ್ಯಂತರ ರೂಪಾಯಿ ಜೂಜು ವಹಿವಾಟು ನಡೆಯುತ್ತದೆ. ರಾಜಕೀಯ ಮುಖಂಡರೇ ಕೋಳಿ ಕಾಳಗ ಆಯೋಜನೆ ಮಾಡುತ್ತಾರೆ. ಈ ಕಾರಣಕ್ಕೆ ಪೊಲೀಸರು ಅವರನ್ನು ಅಲ್ಲೇ ಬಿಟ್ಟು, ಕೋಳಿ, ಬೈಕ್‍ಗಳನ್ನು ಮಾತ್ರ ಜಪ್ತಿ ಮಾಡಿ ಪ್ರಕರಣ ದಾಖಲಿಸುವ ನಾಟಕ ಆಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.