ಮೈಸೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಪತ್ನಿ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮಂಜು ಮೃತ ವ್ಯಕ್ತಿ. ಮಂಜುಗೆ 12 ವರ್ಷದ ಹಿಂದೆ ಲಿಖಿತಾ ಎನ್ನುವವಳ ಜೊತೆ ಮದುವೆ ಆಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕೆಳ ಮಧ್ಯಮ ಕುಟುಂಬವಾದರೂ ಮಂಜು, ತನ್ನ ಕುಟುಂಬವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಐದಾರು ವರ್ಷಗಳ ಹಿಂದೆ ಮಂಜು ಪತ್ನಿ ಲಿಖಿತಾಗೆ ಅನೈತಿಕ ಸಂಬಂಧ ಶುರುವಾಯಿತು. ಲಿಖಿತಾಳ ಊರಾದ ಬೋಗಾದಿಯಲ್ಲಿನ ಯುವಕನ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡು ಅವನ ಜೊತೆ ಮನೆ ಬಿಟ್ಟು ಹೋಗಿದ್ದಳು.
ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿಯನ್ನು ದೊಡ್ಡ ಮನಸ್ಸು ಮಾಡಿ ಮಂಜು ಕ್ಷಮಿಸಿದ್ದ. ಆಗ ಊರಿನವರು ಹಾಗೂ ಸಂಬಂಧಿಗಳು ಲಿಖಿತಾಗೆ ಬುದ್ಧಿ ಹೇಳಿ ಸರಿ ಮಾಡಿದ್ದರು. ಆದರೂ ಈ ಬಗ್ಗೆ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಲೇ ಇತ್ತು.
ತನ್ನ ಪತ್ನಿಯ ನಡವಳಿಕೆ ಬಗ್ಗೆ ಮಂಜು ಆಗಾಗ ಪ್ರಶ್ನೆ ಮಾಡುತ್ತಿದ್ದ. ಇದರಿಂದ ಕೋಪಗೊಂಡಿದ್ದ ಲಿಖಿತಾ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದಿದ್ದಾಳೆ. ರಾತ್ರೋರಾತ್ರಿ ಪ್ರಿಯಕರನ ಜೊತೆ ಸೇರಿ ಲಿಖಿತಾ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಸದ್ಯ ವಿಜಯನಗರ ಪೊಲೀಸರು ಆರೋಪಿ ಲಿಖಿತಾಳನ್ನು ವಶಕ್ಕೆ ಪಡೆದಿದ್ದಾರೆ.