ಮೂರು ದಶಕಗಳ ಬಳಿಕ ಕಟೀಲು ಕ್ಷೇತ್ರದಲ್ಲಿ ಭೀಕರ ಜಲಕ್ಷಾಮ: ಸಂಪೂರ್ಣ ಬತ್ತಿದ ನಂದಿನಿ ನದಿ

ಮಂಗಳೂರು, ಜೂ. 08: ಮುಂಗಾರು ತಡವಾದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಜನಸಾಮಾನ್ಯರು ಹೊಟೇಲ್, ವಾಣಿಜ್ಯ ಉದ್ಯಮಗಳಿಗೆ ನೀರಿನ ಅಭಾವ ತೊಂದರೆಯನ್ನುಂಟು ಮಾಡಿದ್ದು, ಇದೀಗ ದೇವರಿಗೂ ನೀರಿನ ಅಭಾವದ ಬಿಸಿ ತಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಜನರ ಶ್ರದ್ಧಾ ಭಕ್ತಿಯ ಆರಾಧ್ಯ ಕೇಂದ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೀಕರ ಜಲಕ್ಷಾಮ ತಲೆದೂರಿದೆ. ಮೂವತ್ತೊಂದು ವರ್ಷದ ಬಳಿಕ ಕಟೀಲು ಕ್ಷೇತ್ರ ತೀವ್ರದ ಜಲಕ್ಷಾಮ ಕಂಡಿದ್ದು, ಕ್ಷೇತ್ರದ ಪರಮ ಪವಿತ್ರ ನಂದಿನಿ ನದಿ ಸಂಪೂರ್ಣವಾಗಿ ಬತ್ತಿ ಹೋಗಿದೆ. ನದಿ ಬತ್ತಿ ಇತರ ಜಲಮೂಲಗಳಲ್ಲೂ ನೀರಿನ ಪ್ರಮಾಣ ಪಾತಾಳಕ್ಕೆ‌ ಕುಸಿದಿದ್ದು, ಕ್ಷೇತ್ರದ ವಿವಿಧ ಚಟುವಟಿಕೆಗಳಿಗೆ ಭಾರೀ ತೊಡಕು ಉಂಟಾಗಿದೆ.

ಕಟೀಲು ಕ್ಷೇತ್ರಕ್ಕೆ ಸಂಬಂಧಿಸಿದ ಶಾಲಾ-ಕಾಲೇಜುಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಕ್ಷೇತ್ರದಿಂದಲೇ‌ ನೀಡಲಾಗುತಿತ್ತು. ಆದರೆ ಇದೀಗ ನೀರಿನ ಅಲಭ್ಯತೆಯಿಂದ ಮಕ್ಕಳ‌ ಬಿಸಿಯೂಟವನ್ನು ನಿಲುಗಡೆ ಮಾಡಲಾಗಿದೆ. ಕಟೀಲು ಕ್ಷೇತ್ರಕ್ಕೆ ಸಂಬಂಧಿಸಿದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಅರ್ಧ ದಿನ ತರಗತಿ ನಡೆಸಿ ಮಳೆ ಬರುವ ತನ ಇದೇ ಮಾದರಿಯಲ್ಲಿ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಂಪೂರ್ಣ ರಜೆ ಸಾರಲಾಗಿದ್ದು, ಫ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ತನಕ ತರಗತಿಗಳನ್ನು ನಡೆಸಲಾಗುತ್ತಿದೆ. ಕ್ಷೇತ್ರದ ಗೋಶಾಲೆಯ ಗೋವುಗಳಿಗೂ ನೀರಿನ ಬರ ಕಂಡಿದೆ. ಕ್ಷೇತ್ರದ ಭಕ್ತರು ಟ್ಯಾಂಕರ್ ಮೂಲಕ ಗೋಶಾಲೆಗೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇನ್ನು ಕ್ಷೇತ್ರದ ಮುಂಭಾಗ ಕಾಲು ತೊಳೆಯಲು ಅಳವಡಿಸಲಾಗಿದ್ದ ನಂದಿನಿ ಜಲಧಾರೆಯಲ್ಲೂ ನೀರಿನ ನಲ್ಲಿಯನ್ನು ಸ್ಥಗಿತಗೊಳಿಸಲಾಗಿದೆ. ಶೌಚಾಲಯಗಳಲ್ಲೂ ಕೆಲವು ನಲ್ಲಿಗಳಲ್ಲಿ ಮಾತ್ರ ನೀರು ಬರುವಂತೆ ಮಾಡಲಾಗಿದೆ. ಇನ್ನು ಕ್ಷೇತ್ರದಲ್ಲಿ ನಡೆಯುವ ನಿತ್ಯ ಅನ್ನಸಂತರ್ಪಣೆಗೆ ಹಾಳೆ ತಟ್ಟೆಯ ಬಳಕೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸ್ಟೀಲ್ ಬಟ್ಟಲುಗಳನ್ನು ಅನ್ನಸಂತರ್ಪಣೆಗೆ ಬಳಕೆ ಮಾಡಲಾಗುತ್ತಿತ್ತು. ಆದರೆ ಬಟ್ಟಲುಗಳನ್ನು ತೊಳೆಯಲು ಅಪಾರ ಪ್ರಮಾಣದ ನೀರು ಬೇಕಾಗಿರೋದರಿಂದ ಇದೀಗ ಬಳಸಿ ಬಿಸಾಡುವ ಹಾಳೆ ತಟ್ಟೆಯ ಬಳಕೆ ಮಾಡಲಾಗುತ್ತಿದೆ.

ಮಳೆಗಾಲದಲ್ಲಿ ಭೋರ್ಗರೆದು ಹರಿಯುವ ನಂದಿನಿ ನದಿ ಸದ್ಯ ಸಂಪೂರ್ಣ ಬತ್ತಿದೆ. ಎಲ್ಲಿ‌ ನೋಡಿದರಲ್ಲಿ ನದಿಯಲ್ಲಿ ಕಲ್ಲು ಬಂಡೆಗಳೇ ಕಾಣುತ್ತಿದ್ದು, ಮಳೆ ಸುರಿಯಲಿ ನಂದಿನಿಯಲ್ಲಿ ಮತ್ತೆ ನೀರು ಹರಿಯಲಿ ಅನ್ನೋದು ಭಕ್ತರ ಆಶಯವಾಗಿದೆ. ಜಲಕ್ಷಾಮದ ಬಗ್ಗೆ ಕಟೀಲು ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಮೂವತ್ತೊಂದು ವರ್ಷದ ಬಳಿಕ ಈ ರೀತಿಯ ಜಲ ಕ್ಷಾಮ ಬಂದಿದೆ. ಜನವರಿಯಲ್ಲೇ ನಂದಿನಿ ನದಿ ನೀರಿನ ಹರಿವು ನಿಂತಿದೆ. ಈ ಬಾರಿ ತುಂಬಾ ನೀರಿನ ಸಮಸ್ಯೆಯನ್ನು ಎದುರಿಸಿದ್ದೇವೆ. ಸದ್ಯ ಕಾಲು ತೊಳೆದು ದೇವಸ್ಥಾನದ ಒಳಗೆ ಹೋಗೋದಕ್ಕೆ ಸಾಧ್ಯವಿಲ್ಲ. ಈಗ ಇರುವ ನೀರಿನ ಲಭ್ಯತೆ ಒಂದು ವಾರದ ತನಕ ಸಾಕಾಗಬಹುದು. ಊಟಕ್ಕೆ ಸದ್ಯ ಹಾಳೆಯ ತಟ್ಟೆಯ ಬಳಕೆ ಮಾಡುತ್ತಿದ್ದೇವೆ. ಕ್ಷೇತ್ರದ ಶಾಲಾ-ಕಾಲೇಜುಗಳಿಗೆ ಬಿಸಿಯೂಟವನ್ನು ನಿಲುಗಡೆ ಮಾಡಿದ್ದೇವೆ. ದೇವರ ಎದರು ದಮ್ಮಯ್ಯ ಮಳೆ ಸುರಿಸುವಂತೆ ಪ್ರಾರ್ಥನೆ ಮಾಡಿದ್ದೇವೆ. ಮಳೆ ಸುರಿಯುವ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ಹರಿನಾರಾಯಣ ಅಸ್ರಣ್ಣ ಹೇಳಿದ್ದಾರೆ.

  • oneindia

Check Also

ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ನಿಷೇಧ: ಸರ್ಕಾರ ಆದೇಶ

ಬೆಂಗಳೂರು: ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ನಿಯವು ಸರ್ಕಾರಿ, …

Leave a Reply

Your email address will not be published. Required fields are marked *

You cannot copy content of this page.