ಬೆಂಗಳೂರು: ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಮಾತಿಗೆ ಬದ್ಧವಾಗಿ ತೀರ್ಮಾನ ತೆಗೆದುಕೊಂಡಿದೆ. 5 ಗ್ಯಾರಂಟಿ ಯೋಜನೆ ಜಾರಿಗೆ ಬೇಕಾದ ಎಲ್ಲಾ ತಯಾರಿ ಮಾಡಿ ಇಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಹಾಗಾದ್ರೆ ಗ್ಯಾರಂಟಿ ಯೋಜನೆಗಳ ರೂಲ್ಸ್ ಏನು? ಇಲ್ಲಿ ತಿಳಿಯಿರಿ.
ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ 5 ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಯಲೇಬೇಕಾದ ಮಾಹಿತಿಯನ್ನ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಯೋಜನೆ ಜಾರಿ & ಯೋಜನೆಯ ರೂಲ್ಸ್ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಗ್ಯಾರಂಟಿ ಯೋಜನೆಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು ಇಲ್ಲಿವೆ ತಿಳಿಯಿರಿ.
ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ!
ಅಂದಹಾಗೆ ಡಿಸಿಎಂ ಮಾಡಿರುವ ಟ್ವೀಟ್ ಹೀಗಿದೆ. ‘ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಜಾರಿಗೊಳಿಸಲು ಇಂದು ಕ್ಯಾಬಿನೆಟ್ ಸಭೆಯಲ್ಲಿ ಸಮ್ಮತಿ ನೀಡಲಾಗಿದ್ದು, ಕರ್ನಾಟಕದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು ಈ ಕೆಳಕಂಡಂತಿವೆ.’ ಎಂದಿದ್ದಾರೆ. ಹಾಗಾದ್ರೆ 5 ಗ್ಯಾರಂಟಿ ಯೋಜನೆಗಳ ಕಂಪ್ಲೀಟ್ ಮಾಹಿತಿ ಇಲ್ಲಿ ತಿಳಿಯೋಣ.
ಗೃಹಜ್ಯೋತಿ ಜಾರಿಗೆ ಕೌಂಟ್‌ಡೌನ್ ಶುರು
ವಾರ್ಷಿಕ ವಿದ್ಯುತ್ ಬಿಲ್‌ನ ಸರಾಸರಿಯಲ್ಲಿ 200 ಯೂನಿಟ್ ಒಳಗೆ ಬಳಸಿದ್ದರೆ ಅಂತಹ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಲಾಗುವುದು. ವಾರ್ಷಿಕ ಸರಾಸರಿ ಮೇಲೂ ಕೂಡ 10%ಅನ್ನು ಉಚಿತ ಎಂದು ಪರಿಗಣಿಸಲಾಗುವುದು. ಎಂದು ಗೃಹಜ್ಯೋತಿ ಯೋಜನೆ ಅಂದರೆ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಅಧಿಕೃತ ಮಾಹಿತಿ ನೀಡಿದೆ.
ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಮಾಹಿತಿ
ಅರ್ಹ ಫಲಾನುಭವಿಯಾಗಲು ಮನೆಯ ಯಜಮಾನಿಯರು ಜೂನ್ 15ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಿ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮೊದಲಾದ ವಿವರ ನೀಡಬೇಕಿದೆ. ಆಗಸ್ಟ್ 15ರಿಂದ ಈ ಯೋಜನೆ ಜಾರಿಗೆ ಬರಲಿದ್ದು, ಮನೆ ಯಜಮಾನಿ ಖಾತೆಗೆ ನೇರ 2000 ರೂ. ಜಮಾವಣೆಯಾಗುತ್ತೆ. ಎಪಿಎಲ್ & ಬಿಪಿಎಲ್ ಕಾರ್ಡ್ ಹೊಂದಿರುವವರು, ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವವರೂ ಈ ಯೋಜನೆ ಫಲಾನುಭವಿಗಳಾಗಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಶಕ್ತಿ ಗ್ಯಾರಂಟಿ ಕುರಿತು ಡೀಟೇಲ್ಸ್
ಜೂನ್ 11ರಿಂದ ಈ ಯೋಜನೆ ಜಾರಿಗೆ ಬರಲಿದೆ. ಸಿಟಿ ಬಸ್‌ಗಳು ಸೇರಿದಂತೆ ರಾಜ್ಯ ಸಾರಿಗೆಯ ಎಲ್ಲ ಬಸ್‌ಗಳಲ್ಲೂ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಆದರೆ, ರಾಜ್ಯ ಸಾರಿಗೆ ಬಸ್‌ಗಳಲ್ಲೇ ಹೊರ ರಾಜ್ಯಗಳಿಗೆ ಪ್ರಯಾಣಿಸಲು ಅವಕಾಶವಿಲ್ಲ ಎಂದು ಶಕ್ತಿ ಗ್ಯಾರಂಟಿ ಕುರಿತು ಮಾಹಿತಿ ನೀಡಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್. ಅಲ್ಲದೆ ಅನ್ನ ಭಾಗ್ಯ ಯೋಜನೆಯ ಬಗ್ಗೆ, ಈಗಾಗಲೇ ಪ್ರಸಕ್ತ ತಿಂಗಳ ಪಡಿತರ ವಿಲೇವಾರಿಯಾಗಿರುವ ಕಾರಣ, ಜುಲೈ 1ರಿಂದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ ಮಾಸಿಕ 10 ಕೆಜಿ ಆಹಾರ ಧಾನ್ಯ ವಿತರಿಸಲಾಗುವುದು ತಿಳಿಸಿದ್ದಾರೆ ಡಿಸಿಎಂ.
ಯುವನಿಧಿ ಯೋಜನೆಯ ಮಾಹಿತಿ
ಇನ್ನು 2022-23ರ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆ ಹೊಂದಿದವರಿಗೆ 6 ತಿಂಗಳ ಗ್ರೇಸ್ ಪಿರಿಯಡ್ ಇರುತ್ತದೆ. ಆರು ತಿಂಗಳ ನಂತರವೂ ಕೆಲಸ ಸಿಗದಿದ್ದರೆ 24 ತಿಂಗಳುಗಳ ಕಾಲ ಪಧವೀಧರರಿಗೆ ಮಾಸಿಕ 3ಸಾವಿರ ರೂಪಾಯಿ & ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುವುದು. 6 ತಿಂಗಳ ಒಳಗೆ ಖಾಸಗಿ/ಸರ್ಕಾರಿ ಕೆಲಸ ದೊರೆತರೆ ಅಥವಾ ಅರ್ಜಿ ಸಲ್ಲಿಸಿದ ನಂತರ ಕೆಲಸ ಸಿಕ್ಕರೂ ಅಂತಹವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಎಂದು ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಅಧಿಕೃತವಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದೆ. ಯೋಜನೆಗೆ ರೂಲ್ಸ್ ಕೂಡ ಫಿಕ್ಸ್ ಆಗಿದ್ದು ಆ ಬಗ್ಗೆ ಮಾಹಿತಿ ನೀಡಲಾಗಿದೆ. ಬಹುತೇಕ ಯೋಜನೆಗಳು ಮುಂದಿನ ತಿಂಗಳ ಒಳಗಾಗಿ ಜಾರಿಗೆ ಬರಲಿವೆ. ಹೀಗೆ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳು ಪೂರ್ಣವಾಗಿವೆ.