67 ವರ್ಷಗಳ ಪುರಾತನದ ವೇಣೂರು ಸರಕಾರಿ ಪ್ರೌಢಶಾಲೆ ಕಟ್ಟಡ ಇತಿಹಾಸದ ಪುಟಕ್ಕೆ?! ವೇಣೂರು ಸರಕಾರಿ ಪ್ರೌಢಶಾಲೆಗೆ ಹೊಸ ಬಿಲ್ಡಿಂಗ್! ಪೂರ್ಣ ಸ್ಥಳಾಂತರಿಸಲು ಬೇಕಿವೆ ಇನ್ನಷ್ಟು ಮೂಲಸೌಲಭ್ಯ

ವೇಣೂರು, ಎ. 22: ಎತ್ತರದ ಪ್ರದೇಶ…. ಮೆಟ್ಟಿಲುಗಳಲ್ಲಿ ಹೆಜ್ಜೆ ಇಡುತ್ತಾ ಹೋದಂತೆ ದೇಗುಲಕ್ಕೆ ಪ್ರವೇಶಿಸಿದ ಅನುಭವ.. ಒಳಗೆ ಮೂರು ಸುತ್ತಲು ಕಟ್ಟಡ… ಅರ್ಥವಾಗುವ ರೀತಿಯಲ್ಲಿ ಹೇಳಬೇಕಾದರೆ ಸ್ಮಾಲ್ ಲೆಟರ್ m ವಿನ್ಯಾಸದಲ್ಲಿರುವ 67 ವರ್ಷಗಳ ಪುರಾತನದ ಅತ್ಯಂತ ಆಕರ್ಷಣೀಯ ವೇಣೂರು ಸರಕಾರಿ ಪ್ರೌಢಶಾಲೆ ಕಟ್ಟಡ ಇತಿಹಾಸದ ಪುಟಕ್ಕೆ ಸೇರಲಿವೆಯೇ? ಹೌದು ಎನ್ನುತ್ತಿದೆ ಪ್ರೌಢಶಾಲೆಗೆ ನಿರ್ಮಾಣವಾದ ಹೊಸ ಕಟ್ಟಡ.

ವೇಣೂರು ಸರಕಾರಿ ಪ್ರೌಢಶಾಲೆಗೆ ನೂತನ ಕಟ್ಟಡ ಮಂಜೂರುಗೊಂಡು ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಆದರೆ ಈಗ ಇಲ್ಲಿ ನಿರ್ಮಿಸಿದ ನೂತನ ಕಟ್ಟಡದಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ಕೊಠಡಿಗಳು ಸಾಕಾಗುವುದಿಲ್ಲ. ಆದ್ದರಿಂದ ಮುಂಬರುವ ಸಾಲಿನ ಶೈಕ್ಷಣಿಕ ವರ್ಷವನ್ನು ಹೊಸ ಕಟ್ಟಡದಲ್ಲಿ ಆರಂಭಿಸಲು ಅಸಾಧ್ಯವೆನಿಸಿದೆ.

ಸರಿಸುಮಾರು 67 ವರ್ಷಗಳ ಇತಿಹಾಸ ಇರುವ ವೇಣೂರು ಸರಕಾರಿ ಪ್ರೌಢಶಾಲೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಕಟ್ಟಡ ಪುನರ್ ರಚನೆ ಆಗಬೇಕೆಂಬ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ಹಾಗೂ ಶಾಲಾಭಿವೃದ್ಧಿ ಸಮಿತಿ ಶ್ರಮದಿಂದ ಸರಕಾರದಿಂದ 2018ರಲ್ಲಿ ರೂ. 15.75 ಲಕ್ಷ ಹಾಗೂ 2020ರಲ್ಲಿ ರೂ. 1.10 ಕೋಟಿ ಅನುದಾನ ಮಂಜೂರುಗೊಂಡಿತ್ತು.

ನೂತನ ಕಟ್ಟಡ
ಈಗಿರುವ ಪ್ರೌಢಶಾಲೆ ಕಟ್ಟಡವು 28 ಸೆಂಟ್ಸ್ ಜಾಗವನ್ನೊಳಗೊಂಡಿದೆ. ಈ ಶಾಲೆಯ ಮಣ್ಣಿನ ಗೋಡೆಗಳು, ಕಟ್ಟಡದ ಮಹಡಿ ಶಿಥಿಲಾವಸ್ಥೆಗೆ ತಲುಪಿದೆ. ನೂತನ ಕಟ್ಟಡಕ್ಕೆ ಜಾಗದ ಕೊರತೆಯಾಗುತ್ತದೆ ಅನ್ನುವ ನಿಟ್ಟಿನಲ್ಲಿ ಸ್ಥಳೀಯವಾಗಿರುವ ಸುಮಾರು 3.90 ಎಕ್ರೆಯ ಸ.ಪ.ಪೂ. ಕಾಲೇಜು ಜಾಗದಲ್ಲಿ 8 ಕೊಠಡಿಗಳ ನೂತನ ಪ್ರೌಢಶಾಲೆ ಕಟ್ಟಡ ನಿರ್ಮಾಣವಾಗುತ್ತಿದೆ. ಶಾಸಕ ಹರೀಶ್ ಪೂಂಜ ಅವರ ಶ್ರಮದಲ್ಲಿ ಎಂ.ಆರ್.ಪಿ.ಎಲ್.ನಿಂದ ಈಗಾಗಲೇ ಹೈಟೆಕ್ ಶೌಚಾಲಯ ಕೂಡಾ ನಿರ್ಮಾಣ ಆಗಿದೆ.

ಏರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ
ತಾಲೂಕಿನಲ್ಲೇ ಗರಿಷ್ಠ ವಿದ್ಯಾರ್ಥಿಗಳು ಎಂಬ ಹೆಗ್ಗಳಿಕೆಗೆ ವೇಣೂರು ಶಾಲೆ ಪಾತ್ರವಾಗಿದೆ. ಮೂರು ತರಗತಿಗಳ 11 ವಿಭಾಗಗಳಿದ್ದು, ವರ್ಷದಿಂದ ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. 2019-20ರಲ್ಲಿ 526 ವಿದ್ಯಾರ್ಥಿಗಳು, 20-21ರಲ್ಲಿ 545, 21-22ರಲ್ಲಿ 548 ಹಾಗೂ ಪ್ರಸಕ್ತ ಸಾಲಿನಲ್ಲಿ ಬರೊಬ್ಬರಿ 560 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. 2014-15ರಿಂದ ಆಂಗ್ಲಮಾಧ್ಯಮ ತರಗತಿ ಆರಂಭವಾಗಿದೆ.

ಶೈಕ್ಷಣಿಕ ಸಾಧನೆ
ಅತ್ಯಧಿಕ ವಿದ್ಯಾರ್ಥಿಗಳಿದ್ದರೂ ಶೈಕ್ಷಣಿಕ ಸಾಧನೆಗೆ ಕಡಿಮೆಯಿಲ್ಲ. ಕಳೆದೈದು ವರ್ಷಗಳಿಂದ ಶೇ. 95ರ ಆಸುಪಾಸಿನಲ್ಲೇ ಫಲಿತಾಂಶ ದಾಖಲಿಸಿಕೊಂಡಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ವಿಶೇಷವಾಗಿ ಆಂಗ್ಲಮಾಧ್ಯಮ ವಿಭಾಗ ಆರಂಭವಾದಗಿನಿಂದ ಸತತ 6 ವರ್ಷಗಳಲ್ಲಿ ಶೇ. 100 ಫಲಿತಾಂಶ ದಾಖಲಿಸಿರುವುದು ಶಾಲೆಯ ಹೆಮ್ಮೆಯ ವಿಚಾರ. ಅದರಲ್ಲೂ ಕಳೆದ ಸಾಲಿನ ಎಸೆಸ್ಸೆಲ್ಸಿಯಲ್ಲಿ ಶಿಕ್ಷಕ ದಿ. ಸುಕೇಶ್ ಕೆ. ಅವರ ಪುತ್ರಿ ಸಂಪದಾ 624 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ದ್ವಿತೀಯ ರ್‍ಯಾಂಕ್ ಪಡೆದು ರಾಜ್ಯಕ್ಕೆ ಮತ್ತು ಶಾಲೆಗೆ ಕೀರ್ತಿ ತಂದಿರುವುದು ಇದೀಗ ಇತಿಹಾಸ.

ಬೇಕಿವೆ ಮೂಲಸೌಲಭ್ಯ
ತರಗತಿಗಳನ್ನು ಸ್ಥಳಾಂತರಿಸಿ ನೂತನ ಕಟ್ಟಡದಲ್ಲಿ ತರಗತಿಗಳನ್ನು ಆರಂಬಿಸಲು ಇನ್ನಷ್ಟು ಮೂಲಸೌಲಭ್ಯಗಳ ಅಗತ್ಯತೆ ಇದೆ. 3 ತರಗತಿ ಕೊಠಡಿಗಳ ಜತೆ ಅವಶ್ಯಕವಾಗಿ ಶಾಲಾ ಕಚೇರಿ, ಶಿಕ್ಷಕರ ಕೊಠಡಿ, ಬಿಸಿಯೂಟದ ಕೊಠಡಿ, ದಾಸ್ತಾನು ಕೊಠಡಿಯ ಅವಶ್ಯತೆ ಇದೆ. ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಕ್ರೀಡೆ-ಸಂಗೀತ ಕೊಠಡಿಯ ಜತೆ ಹೆಣ್ಣು ಮಕ್ಕಳ ವಿಶ್ರಾಂತಿ ಕೊಠಡಿ ನಿರ್ಮಾಣ ಆಗಬೇಕಿದೆ. ಎಂ.ಆರ್.ಪಿ.ಎಲ್.ನಿಂದ ನಿರ್ಮಿಸಲಾದ ಶೌಚಾಲಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಮೀಸಲಿಟ್ಟರೆ, ಹುಡುಗರಿಗೆ 5 ಶೌಚಾಲಯ ಮತ್ತು ಕನಿಷ್ಠ 25 ಮೂತ್ರಾಲಯಗಳು ಹಾಗೂ ಹೆಣ್ಣು ಮಕ್ಕಳಿಗೆ ಕನಿಷ್ಠ 25 ಶೌಚಾಲಯಗಳ ಅವಶ್ಯಕತೆ ಇದೆ. ಪ್ರಥಮ ಮಹಡಿಯ ಮೇಲೆ ಸೀಟ್ ಹಾಕಿ ತಾತ್ಕಾಲಿಕವಾಗಿ 4 ತರಗತಿಗಳನ್ನು ನಡೆಸಬಹುದಾಗಿದ್ದು, ಉಳಿದಂತೆ ಸೌಲಭ್ಯಗಳು ಆಗದೆ ಪೂರ್ಣವಾಗಿ ಸ್ಥಳಾಂತರ ಕಷ್ಟಸಾಧ್ಯವಾಗಿದೆ.

Check Also

ರೇಷನ್‌ ಕಾರ್ಡ್‌ ಕಳೆದು ಹೋದರೆ ಚಿಂತೆ ಮಾಡಬೇಡಿ ಹೀಗೆ ಮಾಡಿ

ರೇಷನ್‌ ಕಾರ್ಡ್‌ ಕಳದುಹೋದರೆ ಚಿಂತಿಸಬೇಡಿ. ಸರ್ಕಾರ ನಿಮಗಾಗಿ ಹೊಸ ವ್ಯವಸ್ಥೆಯನ್ನು ಕಲ್ಪಿಸಿದೆ. NFSA ನ ಅಧಿಕೃತ ವೆಬ್‌ಸೈಟ್‌ https: //www.nfsa.gov.in …

Leave a Reply

Your email address will not be published. Required fields are marked *

You cannot copy content of this page.