



ವೇಣೂರು, ಮೇ 27: ಒಂದಲ್ಲೊಂದು ವಿಚಾರಗಳಲ್ಲಿ ಸದಾ ಸುದ್ದಿಯಾಗುತ್ತಿರುವ ವೇಣೂರು ಗ್ರಾ.ಪಂ. ಪ್ರಸ್ತುತ ಆಡಳಿತದ ಚುಕ್ಕಾಣಿಯ ಬಳಿಕ ತಣ್ಣಗಾಗಿತ್ತು. ಇದೀಗ ಮತ್ತೆ ಸದಸ್ಯರಿಂದ ರಾಜೀನಾಮೆಯ ಮಾತು ಕೇಳಿ ಬಂದಿದ್ದು, ಆಡಳಿತ ಮಂಡಳಿಯಲ್ಲಿ ಹೊಂದಾಣಿಕೆ ಕೊರತೆ ಉಂಟಾಗಿದೆಯೇ ಅನ್ನುವ ಅನುಮಾನ ಕಾಡತೊಡಗಿದೆ.
ಹೌದು ಹೋರಾಟಗಳ ಹಾದಿಯಲ್ಲೇ ಸಾಗುತ್ತಿರುವ ಅನೂಪ್ ಜೆ. ಪಾಯಸ್ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಗ್ರಾ.ಪಂ.ನ ಸದಸ್ಯ ಸ್ಥಾನಕ್ಕೆ ರಾಜೀರಾಮೆ ನೀಡುವ ಬಗ್ಗೆ ಕ್ಲೂ ನೀಡಿದ್ದಾರೆ.
ಅವರು ಕಾಂಗ್ರೆಸ್ ನಾಯಕರ ಮುನಿಸಿನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ವೇಣೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಸ್ಥಾನಕ್ಕೆ ಬಹುಮತಗಳಿಂದ ಚುನಾಯಿತರಾಗಿದ್ದರು. ಇಲ್ಲಿಯ ೨೪ ಸದಸ್ಯರೂ ಬಿಜೆಪಿ ಬೆಂಬಲಿತ ಸದಸ್ಯರೇ ಆಗಿದ್ದು, ಆದರೂ ಆಡಳಿತ ನಡೆಸುತ್ತಿದ್ದ ಮಂಡಳಿಯಲ್ಲಿ ಹೊಂದಾಣಿಕೆ ಇಲ್ಲವೇ ಅನ್ನುವ ಅನುಮಾನ ಮೂಡಿದೆ.
ರಾಜೀರಾಮೆ ವಿಚಾರ ಯಾತಕ್ಕೆ?
ಸಾಮಾಜಿಕ ಜಾಲತಾಣದಲ್ಲಿ ರಾಜೀನಾಮೆ ವಿಚಾರವನ್ನು ಪೋಸ್ಟ್ ಮಾಡಿರುವ ಅನೂಪ್ ಜೆ. ಪಾಯಸ್ ಅವರನ್ನು ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ಮಾತನಾಡಿಸಿದ್ದು, ಜಿ.ಪಂ. ಇಂಜಿನಿಯರ್ ಆಗಿದ್ದು ಕೆಲವೇ ದಿನಗಳಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾಗಲಿರುವ ತಮಣ್ಣಗೌಡ ಪಾಟೀಲ್ ಅವರಿಗೆ ಸಮ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅನೂಪ್ ಜೆ. ಪಾಯಸ್ ಅವರ ಮೌಖಿಕ ಮನವಿಯಲ್ಲಿ ಪಂಚಾಯತ್ ಅಧ್ಯಕ್ಷರು ನಿರ್ಲಕ್ಷ್ಯಿಸಿದ್ದು, ಇದರಿಂದ ಬೇಸತ್ತು ರಾಜೀರಾಮೆ ನೀಡುತ್ತಿದ್ದೇನೆ ಎಂದಿದ್ದಾರೆ. ನಾನೀಗ ಮೈಸೂರಿನಲ್ಲಿದ್ದು, ಊರಿಗೆ ಬಂದು ಸೋಮವಾರ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಸಮ್ಮಾನ ಏರ್ಪಡಿಸಲು ಅಧ್ಯಕ್ಷರು ಒಪ್ಪಿಗೆ ಸೂಚಿಸಿದರೆ ಅನೂಪ್ ಜೆ. ಪಾಯಸ್ ರಾಜೀನಾಮೆ ನಿರ್ಧಾರವನ್ನು ವಾಪಾಸು ತೆಗೆದುಕೊಳ್ಳುತ್ತಾರ ಅನ್ನುವುದು ಕಾದುನೋಡಬೇಕಿದೆ.
ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ
ಮೇ 29ರಂದು ನಿವೃತ್ತಿಯಾಗಲಿರುವ ಜಿ.ಪಂ. ಇಂಜಿನಿಯರ್ ಪಾಟೀಲ್ ಅವರಿಗೆ ಸನ್ಮಾನ ಮಾಡುವ ಬಗ್ಗೆ ಸದಸ್ಯರಾದ ಅನೂಪ್ ಜೆ. ಪಾಯಸ್ ಅವರು ಕೇಳಿಕೊಂಡಿದ್ದು, ಎಲ್ಲಾ ಸದಸ್ಯರಲ್ಲಿ ಕೇಳಿ ತೀರ್ಮಾನ ಮಾಡುವ ಎಂದಿದ್ದೇನೆ. ಸೋಮವಾರದ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಅನೂಪ್ ಜೆ. ಪಾಯಸ್‌ರವರು ರಾಜೀರಾಮೆಯ ಬಗ್ಗೆ ಮಾಹಿತಿ ಇಲ್ಲ ಎಂದು ವೇಣೂರು ಗ್ರಾ.ಪಂ. ಅಧ್ಯಕ್ಷರಾದ ನೇಮಯ್ಯ ಕುಲಾಲ್ ಪ್ರತಿಕ್ರಿಯಿಸಿದ್ದಾರೆ.