December 5, 2025
WhatsApp Image 2025-12-02 at 2.34.47 PM

ನವದೆಹಲಿ: ಆಧಾ‌ರ್ ಕಾರ್ಡ್ ಬಳಸಿ ಅಕ್ರಮವಾಗಿ ಸಿಮ್ ಖರೀದಿಸುವುದು, ಮೊಬೈಲ್ ಕಳ್ಳತನ ಆಗುವುದು, ಪ್ರತಿ ಮೊಬೈಲ್‌ಗೂ ನೀಡಲಾಗುವ ಅಂತರರಾಷ್ಟ್ರೀಯ ಮೊಬೈಲ್ ಗುರುತಿನ ಸಂಖ್ಯೆ (ಐಎಂಇಐ) ನಕಲು ಮಾಡುವುದು ಸೇರಿದಂತೆ ಹಲವು ವಂಚನೆಗಳಿಂದ ಜನರನ್ನು ರಕ್ಷಿಸುವ ಸಲುವಾಗಿ ಎಲ್ಲ ಮೊಬೈಲ್‌ಗಳಲ್ಲಿಯೂ ‘ಸಂಚಾರ್‌ ಸಾಥಿ’ ಆ್ಯಪ್ ಅಳವಡಿಕೆ (ಇನ್‌ಸ್ಟಾಲ್) ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.

ಈ ಸಂಬಂಧ ಭಾರತದ ಎಲ್ಲಾ ಮೊಬೈಲ್ ತಯಾರಕರಿಗೆ, ಮೊಬೈಲ್ ಸೆಟ್‌ಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ದೂರಸಂಪರ್ಕ ಸಚಿವಾಲಯವು ನ.28ರಂದು ಕೆಲವು ನಿರ್ದೇಶನಗಳನ್ನು ನೀಡಿ ಆದೇಶ ಹೊರಡಿಸಿದೆ.‘ಭಾರತದಲ್ಲಿ ತಯಾರಾಗುವ ಅಥವಾ ಆಮದು ಮಾಡಿಕೊಳ್ಳಲಾಗುವ ಎಲ್ಲಾ ಮೊಬೈಲ್‌ಗಳಲ್ಲಿಯೂ ‘ಸಂಚಾರ್‌ ಸಾಥಿ’ ಆ್ಯಪ್ ಅನ್ನು ಮೊದಲೇ ಇನ್‌ ಸ್ಟಾಲ್ ಮಾಡಿರಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ (ಇನ್ನೂ ಖರೀದಿಯಾಗದ) ಮೊಬೈಲ್‌ಗಳಲ್ಲಿ ಮೊದಲ ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ಈ ಆ್ಯಪ್ ಅನ್ನು ಬಳಕೆದಾರರಿಗೆ ನೀಡಬೇಕು’ ಎಂದು ಸಚಿವಾಲಯ ಹೇಳಿದೆ.

‘ಈ ಆ್ಯಪ್ ಅನ್ನು ಮೊದಲೇ ‘ಇನ್‌ಸ್ಟಾಲ್’ ಮಾಡಿರುವ ಹೊಸ ಮೊಬೈಲ್‌ಗಳನ್ನು ‘ಸೆಟ್ಟಿಂಗ್’ ಮಾಡಿಕೊಳ್ಳುವಾಗಲೇ ಬಳಕೆದಾರರಿಗೆ ಈ ಆ್ಯಪ್ ಇರುವುದು ಸುಲಭವಾಗಿ ಕಾಣುವಂತೆ ಮಾಡಬೇಕು. ಈ ಆ್ಯಪ್‌ನ ಕಾರ್ಯಾಚರಣೆಯನ್ನು ಡಿಸೇಬಲ್‌ ಮಾಡುವುದಾಗಲೀ ಅಥವಾ ನಿರ್ಬಂಧಿಸುವುದಾಗಲೀ ಮಾಡುವಂತಿಲ್ಲ’ ಎಂದು ಆದೇಶದಲ್ಲಿ ಹೇಳಲಾಗಿದೆ.‘ತಯಾರಿಕಾ ಕಂಪನಿಗಳು ಮತ್ತು ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳು ಆದೇಶ ಪ್ರಕಟವಾದ 120 ದಿನಗಳ ಒಳಗೆ ಆ್ಯಪ್ ಇನ್‌ ಸ್ಟಾಲ್ ಆದ ಕುರಿತು ವರದಿ ನೀಡಬೇಕು’ ಎಂದೂ ಹೇಳಿದೆ.

2023ರಲ್ಲಿ ‘ಸಂಚಾರ್‌ ಸಾಥಿ’ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಮೊಬೈಲ್ ಕಳ್ಳತನದ ಮೂಲಕವೊ ಅಥವಾ ಡುಪ್ಲಿಕೇಟ್ ಸಿಮ್ ಬಳಸಿಕೊಳ್ಳುವ ಮೂಲಕವೊ ಐಎಂಇಐ ಸಂಖ್ಯೆ ನಕಲು ಮಾಡಿಕೊಂಡು ಎಸಗುವ ವಂಚನೆಯನ್ನು ಪತ್ತೆ ಮಾಡಲು ಈ ಆ್ಯಪ್ ಸಹಕಾರಿಯಾಗಲಿದೆ. ‘ಸಂಚಾರ್‌ ಸಾಥಿ’ ಎಂಬ ವೆಬ್‌ಸೈಟ್ ಕೂಡ ಇದೆ.

ಕಳ್ಳತನವಾದ ಮೊಬೈಲ್‌ನ ಐಎಂಇಐ ಸಂಖ್ಯೆ ಬಳಿಸಿಕೊಂಡು ಆ ಮೊಬೈಲ್ ಅನ್ನು ಈ ಆ್ಯಪ್ ಮೂಲಕ ನಿಷ್ಕ್ರಿಯಗೊಳಿಸಬಹುದು. ಐಎಂಇಐ ಸಂಖ್ಯೆಯನ್ನು ನಕಲು ಮಾಡಿಕೊಂಡು ಬೇರೆ ದೇಶದಲ್ಲಿ ಕೂತು ಸೈಬರ್ ಅಪರಾಧ ಬ್ಯಾಂಕ್ ಖಾತೆ ಬಳಕೆ ಸೇರಿದಂತೆ ಹಲವು ಅಕ್ರಮ ಎಸಗಲಾಗುತ್ತದೆ. ಮೊಬೈಲ್ ಖರೀದಿಸುವವರು ಖರೀದಿಗೂ ಮುನ್ನ ಈ ಆ್ಯಪ್ ಮೂಲಕ ತಾವು ಖರೀದಿಸುವ ಐಎಂಇಐ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಬಹುದು. ತಮ್ಮ ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಬಳಸಿಕೊಂಡು ಅಕ್ರಮವಾಗಿ ಸಿಮ್ ಖರೀದಿ ಮಾಡಲಾಗಿದ್ದರೆ ಈ ಆ್ಯಪ್ ಮೂಲಕ ಅಂಥ ಅಕ್ರಮ ಸಂಪರ್ಕವನ್ನು ನಿಷ್ಕ್ರಿಯ ಮಾಡಬಹುದು.

About The Author

Leave a Reply

Your email address will not be published. Required fields are marked *

You cannot copy content of this page.