ನವದೆಹಲಿ: ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರಿಷಭ್ ಪಂತ್ ತೀವ್ರ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಕಾರು ಚಾಲನೆ ಮಾಡುವಾಗ ಕ್ರಿಕೆಟರ್ ನಿದ್ರೆಗೆ ಜಾರಿದ ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ಬಿಎಂಡಬ್ಲ್ಯೂ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಕ್ರಿಕೆಟಿಗ ಕಾರಿನಲ್ಲಿ ಒಬ್ಬರೇ ಇದ್ದರು ಮತ್ತು ಧಗಧಗನೇ ಹೊತ್ತಿಉರಿದ ಕಾರಿನ ಗಾಜು ಒಡೆದು ಹೊರ ಬಂದು ಇದೀಗ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ಉತ್ತರಾಖಂಡ್ ಪೊಲೀಸ್ ಡಿಜಿಪಿ ಅಶೋಕ್ ಕುಮಾರ್ ಹೇಳಿದರು.
ಪಂತ್ ಅವರ ಕಾರು ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸಾನ್ ನಡುವೆ ಅಪಘಾತಕ್ಕೀಡಾಗಿದೆ. ರೂರ್ಕಿ ಸಿವಿಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಅವರನ್ನು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಂಗಳೌರ್ ಪೊಲೀಸ್ ಠಾಣೆ ಪ್ರದೇಶದ ರಾಷ್ಟ್ರೀಯ ಹೆದ್ದಾರಿ -58 ರಲ್ಲಿ ಈ ಅಪಘಾತ ಸಂಭವಿಸಿದೆ.
ರಿಷಬ್ ಪಂತ್ ಚಿಕಿತ್ಸೆಗೆ ಏರ್ ಆಂಬ್ಯುಲೆನ್ಸ್ ಸೂಚನೆ ನೀಡಿದ ಉತ್ತರಾಖಂಡ್ ಸಿಎಂ
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಗಾಯಗೊಂಡ ಕ್ರಿಕೆಟಿಗ ರಿಷಭ್ ಪಂತ್ ಅವರ ಚಿಕಿತ್ಸೆಗೆ ಸಾಧ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಮತ್ತು ಅಗತ್ಯವಿದ್ದರೆ ಏರ್ ಆಂಬ್ಯುಲೆನ್ಸ್ ಅನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.