

ಬೆಂಗಳೂರು : ರಾಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಪ್ರೇಮಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ನೇಪಾಳ ಮೂಲದ ಕೃಷ್ಣಕುಮಾರಿ (23) ಎಂಬ ಯುವತಿಯನ್ನು, ಸಂತೋಷ್ ದಾಮಿ (27) ಎಂಬಾತ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೃಷ್ಣಕುಮಾರಿ ನಗರದ ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದಳು ಹಾಗೂ ಆರೋಪಿ ಸಂತೋಷ್ ದಾಮಿ ಟಿಸಿ ಪಾಳ್ಯದಲ್ಲಿ ಬಾರ್ಬರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇನ್ನೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ರಾಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಇಬ್ಬರೂ ಒಂದೇ ರೂಂ ಬಾಡಿಗೆ ಪಡೆದು ಲಿವಿಂಗ್ ರಿಲೇಷನ್ ಶಿಪ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿ ವಿಕೋಪಕ್ಕೆ ತಿರುಗಿ ಕೃಷ್ಣಕುಮಾರಿಯನ್ನ ಸಂತೋಷ್ ದಾಮಿ ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕಾಗಮಿಸಿದ ರಾಮೂರ್ತಿನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಹಂತದಲ್ಲಿದೆ.