ಉತ್ತರಪ್ರದೇಶ: ಉತ್ತರ ಪ್ರದೇಶದ ಸೀತಾಪುರದಲ್ಲಿ ಒಂದೇ ಶಾಲೆಯ 11 ಮತ್ತು 12ನೇ ತರಗತಿಯ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಕುರುಡು ಪ್ರೀತಿಗಾಗಿ ಈ ಮೂವರು 10 ದಿನಗಳ ಅಂತರದಲ್ಲಿ ದುಡುಕು ನಿರ್ಧಾರ ತೆಗೆದುಕೊಂಡು ಸಾವಿನ ಮನೆಯ ಬಾಗಿಲು ತಟ್ಟಿದ್ದಾರೆ.
ಒಂದೇ ಶಾಲೆಯಲ್ಲಿ 11-12ನೇ ತರಗತಿಯಲ್ಲಿ ಓದುತ್ತಿದ್ದ ಮೂವರು ಡಿ.10ರಿಂದ 18ರ ನಡುವೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಕಾರಣವೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಯಾವುದೇ ಪ್ರಕರಣದಲ್ಲಿ ಯಾವುದೇ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ಭಾಗಿಯಾಗಿಲ್ಲವೆಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸೀತಾಪುರ ಸಹಾಯಕ ಪೊಲೀಸ್ ಅಧೀಕ್ಷಕ (ಎಎಸ್ಪಿ)ರು ತಿಳಿಸಿದ್ದಾರೆ.
ಡಿ.10ರಂದು ನಡೆದ ಮೊದಲ ಆತ್ಮಹತ್ಯೆ ಪ್ರಕರಣದಲ್ಲಿ ಯುವತಿ ತನ್ನ ನೆರೆಯವನಾದ ರಾಹುಲ್ ಯಾದವ್ ಜೊತೆ ಪ್ರೇಮ ಸಂಬಂಧ ಹೊಂದಿದ್ದಳಂತೆ. ಇವರಿಬ್ಬರ ಸಂಬಂಧವನ್ನು ಹುಡುಗಿಯ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಹುಲ್ ಯಾದವ್ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ.
ಎರಡನೇ ಆತ್ಮಹತ್ಯೆಯ ಘಟನೆ ಡಿ.12ರಂದು ನಡೆದಿದ್ದು, ಅಂಕಿತ್ ಪಾಸ್ವಾನ್ ಎಂಬ ಯುವಕನನ್ನು ಓರ್ವ ವಿದ್ಯಾರ್ಥಿನಿ ಪ್ರೀತಿಸುತ್ತಿದ್ದಳು. ಹುಡುಗಿಯ ಮನೆಯವರು ಈ ಸಂಬಂಧಕ್ಕೆ ಒಪ್ಪಿದ್ದರು, ಆದರೆ ಅಂಕಿತ್ನ ತಾಯಿ ಮದುವೆಗೆ ವರಕ್ಷಿಣೆಯಾಗಿ ಬೈಕ್ ಕೇಳಿದ್ದರಂತೆ. ಇದರಿಂದ ದುಃಖದಲ್ಲಿ ಮುಳುಗಿದ ಹುಡುಗಿ ಇಲಿ ಪಾಷಾಣ ಕುಡಿದು ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ.
ಮೂರನೇ ಘಟನೆಯಲ್ಲಿ ನದಿಗೆ ಹಾರಿ ಮತ್ತೊಬ್ಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಈಕೆ ಸಹ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಯುವತಿಯ ಸಂಬಂಧಿ ಸಂಜಯ್ ತಿವಾರಿ ಆಕೆಯ ಪ್ರೇಮ ಪ್ರಕರಣದ ಬಗ್ಗೆ ಪೋಷಕರಿಗೆ ತಿಳಿಸಿದ್ದ. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಆದರೆ ಈ ಪ್ರಕರಣದಲ್ಲಿ ಸಂಜಯ್ ತಿವಾರಿ ಭಾಗಿಯಾಗಿದ್ದಾನೆಂದು ಮೃತ ಯುವತಿಯ ಸಹೋದರಿ ಆರೋಪಿಸಿದ್ದಾಳೆ. ನಾವು ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ 4ನೇ ಪ್ರಕರಣದಲ್ಲಿ ಸ್ನೇಹಿತರು ಮಾಡಿದ ಕಾಮೆಂಟ್‌ಗಳಿಂದ ಬೇಜಾರು ಮಾಡಿಕೊಂಡ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಗೆ ಕೌನ್ಸೆಲಿಂಗ್ ಮಾಡಲಾಗಿದ್ದು, ಈಗ ಆರೋಗ್ಯವಾಗಿದ್ದಾಳೆಂದು ಸೀತಾಪುರದ ಎಎಸ್ಪಿ ಮಾಹಿತಿ ನೀಡಿದ್ದಾರೆ.