ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಪದ್ದತಿ ಇನ್ನೂ ಜೀವಂತವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ 21 ವರ್ಷದ ಯುವತಿಗೆ ಕುಟುಂಬಸ್ಥರು ದೇವದಾಸಿ ಪಟ್ಟ ಕಟ್ಟಿರುವ ಘಟನೆ ನಡೆದಿದೆ.
ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಕಳೆದ 7 ತಿಂಗಳ ಹಿಂದೆ ಕುಟುಂಬಸ್ಥರು ಯುವತಿಗೆ ದೇವದಾಸಿ ಪಟ್ಟ ಕಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮ ದೇವಸ್ಥಾನದಲ್ಲಿ ಮುತ್ತು ಕಟ್ಟಿಸಲಾಗಿದೆ. ಗ್ರಾಮದ ದಲಿತ ಮುಖಂಡರೊಬ್ಬರ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸದ್ಯ ಯುವತಿಯನ್ನು ಇದೀಗ ರಕ್ಷಣೆ ಮಾಡಲಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆರೈಕೆ ಮಾಡಲಾಗುತ್ತಿದೆ. ಪ್ರಕರಣ ಸಂಬಂಧ ಯುವತಿಯ ತಂದೆ, ತಾಯಿ ಹಾಗೂ ಅಕ್ಕನ ಗಂಡನ ವಿರುದ್ಧ ಮುನಿರಾಬಾದ್ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಯುವತಿಯ ತಂದೆ, ತಾಯಿ, ಅಕ್ಕನ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.