ಮಂಗಳೂರು: ಮನೆಯೊಂದರಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೋಮವಾರ ಆರೋಪ ಸಾಬೀತಾಗಿದ್ದು, ಆರೋಪಿಗೆ ಶಿಕ್ಷೆ ಪ್ರಮಾಣವು ಜೂ.27ರಂದು ಪ್ರಕಟವಾಗಲಿದೆ.ಮಂಜೇಶ್ವರ ಸಮೀಪದ ಪಾತೂರು ವರ್ಕಾಡಿ ಬದಿಮಾಲೆ ನಿವಾಸಿ ಮುಹಮ್ಮದ್ ಅಶ್ರಫ್ ಯಾನೆ ಅಶ್ರಫ್ (33) ಶಿಕ್ಷೆಗೊಳಗಾದ ಆರೋಪಿ. ಈತನು ಬಾಳೆಪುಣಿ ಗ್ರಾಮದ ಬೆಳ್ಕೇರಿಯ ಮಹಿಳೆಯನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದ.ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಅಶ್ರಫ್ ಕೊಲೆಯಾದ ಮಹಿಳೆಯ ಸಹೋದರನ ಮನೆಯ ತೋಟದ ಕೆಲಸಕ್ಕೆ ಹೋಗುತ್ತಿದ್ದ. ಈ ಸಂದರ್ಭ ಮಹಿಳೆಯು ತನ್ನ ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ್ದ ಈತ ಸ್ಕೂಟರ್‌ನಲ್ಲಿ ತೆರಳಿ, ಮನೆಯೊಳಗೆ ಅಕ್ರಮ ಪ್ರವೇಶಿಸಿ ಆಕೆಯನ್ನು ಅತ್ಯಾಚಾರವೆಸಗಿದ್ದನಲ್ಲದೆ ಉಸಿರುಗಟ್ಟಿಸಿ ಕೊಲೆಗೈದಿದ್ದ ಎಂದು ಆರೋಪಿಸಲಾಗಿತ್ತು. ಬಳಿಕ ಆರೋಪಿ ಅಶ್ರಫ್ ಮಹಿಳೆಯ ಕಿವಿಯಲ್ಲಿದ್ದ ಚಿನ್ನ ಓಲೆ, ಮನೆಯಲ್ಲಿ ಹಾಲ್‌ನ ಮೇಜಿನ ಡ್ರಾವರ್‌ನಿಂದ 18 ಸಾವಿರ ರೂ. ನಗದು ದೋಚಿದ್ದ. ಅಲ್ಲದೆ ಮಹಿಳೆಯನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿದ್ದ. ಕೃತ್ಯ ನಡೆಸಿದ ಬಗ್ಗೆ ಸುಳಿವು ಸಿಗಬಾರದೆಂದು ಮನೆಯ ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಪೈಪನ್ನು ಎಳೆದು ಹಾಕಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೊಣಾಜೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ವಿಚಾರಣೆ ನಡೆಸಿ, ಆರೋಪಿಯ ವಿರುದ್ಧ ಐಪಿಸಿ 376 (ಅತ್ಯಾಚಾರ), ಐಪಿಸಿ 302 (ಕೊಲೆ) ಪ್ರಕರಣವನ್ನು ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಮಂಗಳೂರು ದಕ್ಷಿಣ ಉಪವಿಭಾಗದ ಅಂದಿನ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ವಿಶೇಷ ತನಿಖಾಧಿಕಾರಿಯಾಗಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ ಡಾ. ಮಹಾಬಲ ಶೆಟ್ಟಿ ಮತ್ತು ಡಾ. ಸೂರಜ್ ಶೆಟ್ಟಿ ಸಾಕ್ಷ್ಯ ನುಡಿದಿದ್ದರು. ಸರಕಾರದ ಪರವಾಗಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಮತ್ತು ಬಿ. ಶೇಖರ್ ಶೆಟ್ಟಿ ವಾದಿಸಿದ್ದರು.