ಕೋಲಾರ: ಕೋವಿಡ್-19 ಸಂದರ್ಭದಲ್ಲಿ ಹಗರಣ ಮಾಡಿರುವುದು ಸಾಬೀತಾದಲ್ಲಿ ಸಾರ್ವಜನಿಕವಾಗಿ ನನಗೆ ನೇಣು ಹಾಕಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪ ಸಂಬಂಧಿಸಿ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕೋವಿಡ್ ವೇಳೆ 3 ಸಾವಿರ ಕೋಟಿ ಖರ್ಚು ಮಾಡಿಲ್ಲ ಎಂಬುದನ್ನು ಶ್ವೇತಪತ್ರದಲ್ಲಿ ಬರೆದುಕೊಡಲು ನಾನು ಸಿದ್ದನಿದ್ದೇನೆ. ಈ ಬಗ್ಗೆ ಚರ್ಚಿಸಲು ಅವಕಾಶ ನೀಡಿದರೂ ಪಲಾಯನವಾದ ಅನುಸರಿಸಿದ ಸಿದ್ದರಾಮಯ್ಯ ಈಗ ವೃಥಾ ಆರೋಪದಲ್ಲಿ ತೊಡಗಿದ್ದಾರೆ. ನಾನು ಹಗರಣ ಮಾಡಿರುವುದು ಸಾಬೀತಾದಲ್ಲಿ ಸಾರ್ವಜನಿಕವಾಗಿ ನನಗೆ ನೇಣು ಹಾಕಿ ಎಂದು ಸವಾಲೆಸೆದರು.
ಜೆಡಿಎಸ್ ಜೊತೆಗಿನ ಅವರ ಅನೈತಿಕ ಸಂಬಂಧದಿಂದ ಬೇಸತ್ತು ನಾನು ಬಿಜೆಪಿಗೆ ಹೋಗಿರುವುದೇ ಹೊರತು ಹಣಕ್ಕಾಗಿ ಹೋಗಿಲ್ಲ ಎನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಆದರೆ ಈಗ ರಾಜಕೀಯ ಕಾರಣಕ್ಕಾಗಿ ಅವರು ನನ್ನ ಮೇಲೆ ವೃಥಾ ಆರೋಪದಲ್ಲಿ ತೊಡಗಿದ್ದಾರೆ. ಆರೋಗ್ಯ ಇಲಾಖೆಯ ಸಮಗ್ರ ಖರ್ಚು ವೆಚ್ಚದ ಲೆಕ್ಕ ನೀಡುತ್ತೇವೆ. ಸಿಎಜಿ ವರದಿ ಬಗ್ಗೆಯೂ ನಾಳೆ ತಿಳಿಸುತ್ತೇನೆ. 2013ರಿಂದ 2018ರವರೆಗೆ 35 ಸಾವಿರ ಕೋಟಿ ಹಣ ವ್ಯತ್ಯಾಸ ಆಗಿದೆ ಎಂದವರು ತಿಳಿಸಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಕಷ್ಟ. ಅವರಿಗೆ ಖೆಡ್ಡಾ ತೋಡಲು ಕೆಲವರು ಯತ್ನಿಸುತ್ತಿದ್ದಾರೆ. ಕೋಲಾರದ ಕಡೆ ಬೌಲಿಂಗ್ ಹಾಕಿ ವರುಣ ಕಡೆ ರನ್ ಮಾಡುತ್ತಾರಷ್ಟೇ ಎಂದು ವ್ಯಂಗ್ಯವಾಡಿದರು.
ಸಿಎಜಿ ವರದಿ ಓದಿಲ್ಲ ಎಂಬ ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಹೇಳಿದಂತೆಯೇ ಹೇಳುತ್ತಿದ್ದಾರಾ ಎಂದು ಪ್ರಶ್ನಿಸಿದ ಡಾ. ಸುಧಾಕರ್, ಸಿದ್ದರಾಮಯ್ಯನವರಷ್ಟು ನಾವು ಬುದ್ದಿವಂತರಲ್ಲ ಎಂದು ಕುಟುಕಿದರು.